ಬೆಂಗಳೂರು: ಸಾಕಷ್ಟು ವಿರೋಧ ಇದ್ದರೂ ಅಬಕಾರಿ ಇಲಾಖೆ ಹರಾಜು ಹಾಕಲು ಮುಂದಾಗಿರುವ 579 ಬಾರ್ ಲೈಸೆನ್ಸ್‌ಗಳ ಸ್ಥಿತಿಗತಿ ಕುರಿತು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್, ಸರ್ಕಾರವನ್ನು ಒತ್ತಾಯಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ, 1987ರಲ್ಲಿ ನಿಗದಿಯಾಗಿದ್ದ ವೈನ್‌ಶಾಪ್ (ಸಿಎಲ್2) ಕೋಟಾದಡಿ ಬಾಕಿ ಉಳಿದಿದ್ದ ಸನ್ನದುಗಳನ್ನು ಹರಾಜು ಹಾಕಲು ಮುಂದಾಗಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಕೋಟಾದಡಿ ಅಷ್ಟೊಂದು ಲೈಸೆನ್ಸ್‌ಗಳು ಬಾಕಿ ಉಳಿದಿಲ್ಲ. ಹಣ ಮಾಡುವುದಕ್ಕಾಗಿ ಇ-ಹರಾಜು ಮೂಲಕ ಲೈಸೆನ್ಸ್ ಹರಾಜು ಹಾಕಲು ಮುಂದಾಗಿರುವುದು ಇಲಾಖೆಯ ಸರಿಯಾದ ನಡೆಯಲ್ಲ. ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ. ಲೈಸೆನ್ಸ್‌ಗಳ ಸ್ಥಿತಿಗತಿ ಕುರಿತು ತನಿಖೆ ನಡೆಸಲು ಲೋಕಾಯುಕ್ತ, ಮತ್ತು ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದರು.
1987ರಲ್ಲಿ ನಿಗದಿಯಾಗಿದ್ದ ವೈನ್‌ಶಾಪ್(ಸಿಎಲ್2), ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್-9) ಕೋಟಾದಡಿ ಬಾಕಿ ಉಳಿದ, ಸ್ಥಗಿತಗೊಂಡ, ಮುಟ್ಟುಗೋಲು ಹಾಕಿಕೊಂಡ, ನವೀಕರಿಸದ, ಪ್ರಾರಂಭವಾಗದ, ಹಿಂಪಡೆದ ಮತ್ತು ರದ್ದುಗೊಳಿಸಿದ ಸನ್ನದು ಎಂದು ಹೇಳಿದ ಇಲಾಖೆ, ‘ಸಿಎಲ್-2ಎ’ ಹಾಗೂ ‘ಸಿಎಲ್-9ಎ’ ಎಂದು ವರ್ಗೀಕರಿಸಿ ಹರಾಜು ಪಟ್ಟಿಗೆ ಸೇರಿಸಿದೆ.1992ರಿಂದ ಹೊಸದಾಗಿ ಸಿಎಲ್2 ಮತ್ತು ಸಿಎಲ್9 ಲೈಸೆನ್ಸ್ ನೀಡಲಾಗುತ್ತಿಲ್ಲ ಎಂದು ಇಲಾಖೆ ಹಲವು ಬಾರಿ ಹೇಳಿದ್ದರೂ ಯಾವ ಮಾನದಂಡ ಆಧಾರದಲ್ಲಿ ಲೈಸೆನ್ಸ್‌ಗಳ ಹರಾಜು ಮಾಡಲಾಗುತ್ತಿದೆ ಎಂದು ಎಸ್. ಗುರುಸ್ವಾಮಿ ಪ್ರಶ್ನಿಸಿದರು.
* ಒಂದೇ ಲೈಸೆನ್ಸ್ 3 ಬಾರಿ ಊರ್ಜಿತ
* ಜಾರಿ ನಿರ್ದೇಶನಾಲಯಕ್ಕೆ(ಇಡಿ) ದೂರು ಸಲ್ಲಿಸಲು ಸಿದ್ಧ
* ತನಿಖೆ ಸಂಸ್ಥೆಗಳಿಗೆ ಎಲ್ಲ ದಾಖಲೆ ಒದಗಿಸಲಾಗುವುದು
* ಪರವಾನಗಿ ಕುರಿತು ಸುಳ್ಳು ಮಾಹಿತಿ ಕೊಟ್ಟ ಅಧಿಕಾರಿಗಳು
* ತನಿಖೆಯಿಂದ ಲೈಸೆನ್ಸ್‌ಗಳ ಸತ್ಯ-ಅಸತ್ಯಗಳು ಬೆಳಕಿಗೆ ಬರಲಿವೆ
ಸ್ಥಗಿತಗೊಂಡ ಸನ್ನದುಗಳ ನಿಖರತೆ ಪರಿಶೀಲಿಸುವ ವೇಳೆ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಸಾಕಷ್ಟು ಲೋಪವಾಗಿದ್ದು, ಸರ್ಕಾರಕ್ಕೆ ತಪ್ಪು ಅಂಕಿಅಂಶ ಕೊಟ್ಟಿದ್ದಾರೆ. 2008-09ರಿಂದ ಇಲಾಖೆಯಲ್ಲಿ ಆಗಿರುವ ಗಂಭೀರ ತಪ್ಪು,ಲೋಪದ ಕುರಿತು ಐಎಎಸ್ ಅಧಿಕಾರಿಯಿಂದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಲೈಸೆನ್ಸ್‌ಗಳ ಪಟ್ಟಿ ತಯಾರಿಸುವಾಗ ಆಗಿರುವ ಲೋಪದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟಿದ್ದೇವೆ.
ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ.