ಹೋಂ ಸ್ಟೇ ಮಾಲೀಕನ ಬಂಧನ ಕಾನೂನುಬಾಹಿರ ಎಂದ ಕರ್ನಾಟಕ ಹೈಕೋರ್ಟ್
- ಕೊಡಗಿನಲ್ಲಿ ನಡೆದಿದ್ದ ಅಮೆರಿಕ ಮೂಲದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಹೊಸ ಟ್ವಿಸ್ಟ್!
- ಹೋಂ ಸ್ಟೇ ಮಾಲೀಕನ ಬಂಧನ ಕಾನೂನುಬಾಹಿರ ಎಂದ ಕರ್ನಾಟಕ ಹೈಕೋರ್ಟ್
- ಮಾಲೀಕನಿಗೆ ₹5 ಲಕ್ಷ ಪರಿಹಾರ ನೀಡಲು ಸರ್ಕಾರಕ್ಕೆ ಆದೇಶ
ಬೆಂಗಳೂರು: ಕಳೆದ ಏಪ್ರಿಲ್ ತಿಂಗಳಲ್ಲಿ ಕೊಡಗಿನ ಹೋಂ ಸ್ಟೇ ಒಂದರಲ್ಲಿ ನಡೆದ ಅಮೆರಿಕ ಮೂಲದ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂ ಸ್ಟೇ ಮಾಲೀಕನ ಬಂಧನ ಅಕ್ರಮ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಬುಧವಾರ (ಜು.15) ಆದೇಶಿಸಿದೆ.
ತನ್ನ ಹೋಂ ಸ್ಟೇನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಪಾಳೆಕಂಡ ಪೊನ್ನಪ್ಪ ಅಲಿಯಾಸ್ ವಿಶಾಲ್ ಎಂಬಾತನ ಬಂಧನವು ಸರಿಯಲ್ಲ ಎಂದ ಜಸ್ಟೀಸ್ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಸರ್ಕಾರಕ್ಕೆ 5 ಲಕ್ಷ ಪರಿಹಾರವನ್ನು ಹೋಂ ಸ್ಟೇ ಮಾಲೀಕನಿಗೆ ನೀಡಬೇಕು, ಆದರೆ ತನಿಖೆಯಿಂದ ಇತನ ಹೆಸರನ್ನು ತೆಗೆಯುವಂತಿಲ್ಲ ಎಂದು ತಿಳಿಸಿದೆ.
ತನ್ನ ಬಂಧನವು ಕಾನೂನಾತ್ಮಕವಾಗಿಲ್ಲ, ಇದರಿಂದ ನನ್ನ ಹಾಗೂ ನನ್ನ ವ್ಯವಹಾರಕ್ಕೆ ತೊಂದರೆ ಆಗಿದೆ ಎಂದು ಪಾಳೆಕಂಡ ಪೊನ್ನಪ್ಪ ಅಲಿಯಾಸ್ ವಿಶಾಲ್ 15 ಲಕ್ಷ ಪರಿಹಾರ ಹಾಗೂ ಎಫ್ಐಆರ್ನಿಂದ ತನ್ನ ಹೆಸರನ್ನು ತೆಗೆಯಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ, ಮಾಲೀಕನ ಬಂಧನ ಅಕ್ರಮವಾಗಿದೆ, ಆದರೆ ಪ್ರಕರಣ ವಿಚಾರಣಾ ಹಂತದಲ್ಲಿದ್ದು, ಮಾಲೀಕನ ಹೆಸರನ್ನು ಕೈ ಬಿಡುವುದು ಬೇಡ. ಅದರೆ ಮುಂದಿನ ನಾಲ್ಕು ವಾರಗಳ ಒಳಗೆ ಸರ್ಕಾರ 5 ಲಕ್ಷ ರೂ. ಅನ್ನು ಮಾಲೀಕನಿಗೆ ಪರಿಹಾರ ಧನವಾಗಿ ನೀಡಬೇಕೆಂದು ಆದೇಶಿಸಿದೆ.
ಈ ಘಟನೆಯು ಏಪ್ರಿಲ್ ತಿಂಗಳಿನಲ್ಲಿ ವರದಿಯಾಗಿತ್ತು. ವಾಷಿಂಗ್ಟನ್ ಮೂಲಕ 33 ವರ್ಷದ ಯುವತಿಯೊಬ್ಬಳು ಕೊಡಗಿನಲ್ಲಿದ್ದ ಈ ಹೋಂ ಸ್ಟೇನಲ್ಲಿ ವಾಸವಿದ್ದಳು. ವೆಲ್ಕಂ ಡ್ರಿಂಕ್ ಎಂದು ನೀಡಿದ್ದ ಪಾನಿಯದಲ್ಲಿ ಮತ್ತು ಬರುವ ಅಂಶವನ್ನು ಬರೆಸಿ ಹೋಂ ಸ್ಟೇ ರೂಂ ಬಾಯ್ ಇಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆಂದು ಮಹಿಳೆ ನೀಡಿದ್ದ ದೂರಿನಲ್ಲಿ ನಮೂದಿಸಲಾಗಿದೆ.
ಹಾಗೆಯೇ ಈ ವಿಷಯ ತಿಳಿದ ಹೋಂ ಸ್ಟೇ ಮಾಲೀಕ ವಿಶಾಲ್, ಮಹಿಳೆ ಸಹಾಯಕ್ಕೆ ಬರುವ ಬದಲು, ವೈ-ಫೈ ಅನ್ನು ಕಡಿತಗೊಳಿಸಿ ವಿಷಯ ಹೊರ ಜಗತ್ತಿಗೆ ಬಾರದ ರೀತಿ ಮಾಡಿದ್ದನೆಂದು ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ. ಈ ಪ್ರಕರಣ ದಾಖಲಾದ ಮೇಲೆ, ಹೋಂ ಸ್ಟೇ ಪರವಾನಗಿಯನ್ನು ಅಮಾನ್ಯಗೊಳಿಸಿ, ವಿಶಾಲ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು, (ಏಜನ್ಸೀಸ್).