ಬೆಂಗಳೂರು: ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಹಾಗೂ ಕಾನೂನುಬಾಹಿರ ಚಟುವಟಿಕೆ ಆರೋಪ ಸಾಬೀತಾದ ಹಿನ್ನೆಲೆ ಸೋಮವಾರ(ಜು. 13) ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ(KPSC Chairman) ಶಿವಶಂಕರಪ್ಪ ಸಾಹುಕಾರ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಮಾನತು ಮಾಡಿದ್ದು, ಅವರ ವಿರುದ್ಧ ತನಿಖೆಗೆ ಕೋರಿ ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್, ಕೆಪಿಎಸ್‌ಸಿ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಅವರ ವಿರುದ್ಧ ಸ್ವಜನ ಪಕ್ಷಪಾತ, ಮಾಹಿತಿಯನ್ನು ಬಹಿರಂಗಪಡಿಸದೇ ಇರುವುದು, ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕಾನೂನುಬಾಹಿರವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟ ಬ್ಗಗೆ ಕ್ರಮಕೈಗೊಳ್ಳುವಂತೆ ಅನೇಕ ದೂರು ಬಂದಿವೆ.
ದೂರಿನನ್ವಯ ಅಧ್ಯಕ್ಷರು ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ತಾವು ಈ ನೇಮಕಾತಿ ಪ್ರಕ್ರಿಯೆಯಿಂದ ದೂರವಿರಲು ಅಥವಾ ಹಿತಾಸಕ್ತಿ ಸಂಘರ್ಷವನ್ನು ಔಪಚಾರಿಕವಾಗಿ ಘೋಷಿಸಲು ವಿಫಲರಾಗಿದ್ದಾರೆ ಎಂದು ಸ್ಪಷ್ಟವಾಗಿ ಕಂಡು ಬಂದಿದೆ. ಅವರ ಪುತ್ರಿಯೊಬ್ಬರು ಮ್ಮ ಕುಟುಂಬದ ವಾರ್ಷಿಕ ಆದಾಯವನ್ನು 40,000 ರೂ. ಎಂದು ಘೋಷಿಸುವ ಮೂಲಕ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.
ವಾಸ್ತವವಾಗಿ ನಿಗದಿತ ಮಿತಿಗಿಂತ ಹೆಚ್ಚಿನ ಆದಾಯವಿದ್ದರೂ ಮತ್ತು ತಮ್ಮ ತಂದೆ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅರಿವಿದ್ದರೂ, ಸತ್ಯಾಂಶಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ಹಾಗೂ ತಿರುಚಿದ ಕಡಿಮೆ ಆದಾಯದ ಘೋಷಣೆಗಳನ್ನು ಬಳಸಿಕೊಂಡು, ಹಿಂದುಳಿದ ವರ್ಗಗಳ (OBC) ಮೀಸಲಾತಿ ಮತ್ತು 'ಕ್ರೀಮಿ ಲೇಯರ್' (Creamy Layer) ವಿನಾಯಿತಿಯನ್ನು ಕೋರಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿವೆ.
ಇದಲ್ಲದೆ, ದಿನಾಂಕ 30-03-2002ರ ಸರ್ಕಾರಿ ಆದೇಶ ಸಂಖ್ಯೆ SWD 225 BCA 2000ರ ಪ್ರಕಾರ, ಕರ್ನಾಟಕದಲ್ಲಿ ಲೋಕ ಸೇವಾ ಆಯೋಗದ ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿಯನ್ನು ಪಡೆಯಲು ಅರ್ಹರಲ್ಲ. ಈ ನಿರ್ಬಂಧವಿದ್ದರೂ ಸಹ, ನಿಯಮ ಮೀರಿ ಲಾಭ ಪಡೆಯುವ ಉದ್ದೇಶದಿಂದ, ಅಧ್ಯಕ್ಷರು ಮತ್ತು ಅವರ ಪುತ್ರಿ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಾರೆ.
ಆಯೋಗದ ಮುಖ್ಯಸ್ಥರ ಆಡಳಿತಾತ್ಮಕ ಮೇಲ್ವಿಚಾರಣೆಯ ಕೊರತೆ ಅಥವಾ ಉದ್ದೇಶಪೂರ್ವಕ ನಿರ್ಲಕ್ಷವಿಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವಿಲ್ಲ ಎಂಬ ಅಂಶ ತಿಳಿದು ಬರುತ್ತದೆ. ಅಧ್ಯಕ್ಷರು ಸಲ್ಲಿಸಿದ ಆದಾಯ ಮತ್ತು ಆಸ್ತಿ ವಿವರಗಳು ಹಾಗೂ ಇನ್ನಿತರ ದಾಖಲೆ ಮತ್ತು ಸಂಗತಿಗಳು ಆಯೋಗದ ಅಧ್ಯಕ್ಷರ ಕಡೆಗೆ ಸ್ಪಷ್ಟವಾಗಿ ಬೊಟ್ಟು ಮಾಡುತ್ತವೆ. ಪ್ರಕರಣದ ಸತ್ಯಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದಾಗ, ಇದು ಅವರ ದುರ್ನಡತೆಗೆ ಸಮಾನವಾಗಿರುತ್ತದೆ.
ಆದ್ದರಿಂದ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕರ್ ಅವರ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಅಗತ್ಯ ತನಿಖೆಗಾಗಿ ಭಾರತದ ಸಂವಿಧಾನದ 317(1) ನೇ ವಿಧಿಯ ಅಡಿಯಲ್ಲಿ ಭಾರತದ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸಲು ಗೌರವಾನ್ವಿತ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಕೆಪಿಎಸ್‌ಸಿ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ರಕ್ಷಿಸುವ ಜೊತೆಗೆ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಪ್ರಭಾವರಹಿತ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ರಾಜ್ಯಪಾಲರು ಶಿವಶಂಕ್ರಪ್ಪರನ್ನು ಅಧ್ಯಕ್ಷ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಮುಂದಿನ ಆದೇಶದವರೆಗೂ ಆಯೋಗದ ಹಿರಿಯ ಸದಸ್ಯರು ಕೆಪಿಎಸ್ಸಿಯ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
ಇನ್ನೂ ಬೆಂಗಳೂರಿನಲ್ಲಿ ಶಿವಶಂಕರಪ್ಪ ಸಾಹುಕಾರ ಅಮಾನತಿಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಅಧಿಕಾರಿ, ಸಂಸ್ಥೆ ಮೇಲೆ ಅನುಮಾನ ಬಂದಾ, ಅವರೇ ರಾಜೀನಾಮೆ ಕೊಟ್ಟು ತನಿಖೆಗೆ ಅವಕಾಶ ಮಾಡಿಕೊಡಬೇಕು. ರಾಜ್ಯಪಾಲರೇ ವಜಾ ಮಾಡಬೇಕೆಂದು ಆದೇಶ ಮಾಡಿದ್ದಾರೆ. ನಿಯಮ ಪ್ರಕಾರ ಮಾಡಿದ್ದಾರೆ.ಆದರೆ ಮುಂದೆ ಅದನ್ನು ಸರಿಪಡಿಸಬೇಕು. ಯುವಕರ ಭವಿಷ್ಯದ ದೃಷ್ಟಿಯಿಂದ ಸಂಸ್ಥೆಯನ್ನು ಬಲಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.