ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಎಸ್‌ಐಟಿ ರಚಿಸಿ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಎಸ್ಎಲ್ಪಿ ಮೂಲಕ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಪ್ರಕರಣದ ತನಿಖೆ ನಡೆಸುವ ಎಸ್ಐಟಿಯ ನೇತೃತ್ವ ವಹಿಸಬೇಕಾದ ಅಧಿಕಾರಿಯನ್ನು ಸ್ವತಃ ಹೈಕೋರ್ಟ್ ಸೂಚಿಸಿದ್ದನ್ನು ರಾಜ್ಯ ಸರ್ಕಾರ ಆಕ್ಷೇಪಿಸಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಸಿಐಡಿ ಶೇ.80ರಷ್ಟು ಮುಗಿಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು, ಹಲವು ಆರೋಪಿಗಳನ್ನು ಬಂಧಿಸಿದೆ.
ಸಿಐಡಿ ಅಧಿಕಾರಿಗಳೇ ದಕ್ಷವಾಗಿ ಕೆಲಸ ಮಾಡುತ್ತಿರುವಾಗ ನಿರ್ಧಿಷ್ಠ ಅಧಿಕಾರಿಯನ್ನು ಗುರುತಿಸಿ ಪ್ರತ್ಯೇಕ ತನಿಖೆಗೆ ಆದೇಶಿಸುವುದು ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಹಿನ್ನೆಲೆ ಆದೇಶಕ್ಕೆ ತಡೆ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಕಳೆದ ಎರಡು ದಿನಗಳ ಹಿಂದೆ ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಡಿ.ಕೆ.ಶಿವಕುಮಾರ್, ಎಸ್‌ಐಟಿ ರಚನೆಗೆ ನ್ಯಾಯಾಲಯ ಆದೇಶಿಸಬಹುದಾದರೂ, ಯಾವ ಅಧಿಕಾರಿಯನ್ನು ತನಿಖಾ ತಂಡಕ್ಕೆ ನೇಮಿಸಬೇಕು ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಇದರಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡೋದು ಸರಿಯಲ್ಲ ಎಂದಿದ್ದರು.
ಪಶು ವೈದ್ಯಾಧಿಕಾರಿಗಳ ನೇಮಕಾತಿ ಸೇರಿ ವಿವಿಧ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಬಿಐ ತನಿಖೆ ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ನ್ಯಾ.ನಾಗಪ್ರಸನ್ನ ಅವರ ನೇತೃತ್ವದ ಪೀಠವು, ಸೋಮವಾರ(ಸೆ. 21) ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ತನಿಖೆಗೆ ಆದೇಶ ನೀಡಿತ್ತು.
100 ದಿನಗಳಲ್ಲಿ ತನಿಖೆ ಮಾಡಿ ವರದಿ ಸಲ್ಲಿಸಬೇಕು. ಈಗಾಗಲೇ ಪ್ರಕರಣ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಹಿನ್ನೆಲೆ ಪರಸ್ಪರ ಸಹಕಾರ ಮೂಲಕ ಎರಡೂ ಏಜೆನ್ಸಿಗಳು ತನಿಖೆ ನಡೆಸಬೇಕು. ಸರ್ಕಾರದ ಎಲ್ಲಾ ಇಲಾಖೆಗಳು ತನಿಖೆಗೆ ಸಂಪೂರ್ಣ ನೆರವು ನೀಡಬೇಕು ಎಂದು ನಿರ್ದೇಶಿಸಿತ್ತು.