ಡಾ.ಬಿ.ಎಲ್. ಶಂಕರ್ 
ರಾಜ್ಯ

ಸಾಂಸ್ಕೃತಿಕ ರಾಜಧಾನಿಯಾಗಿ ಬೆಂಗಳೂರು ರೂಪಿಸಲು ಗುರಿ- B L Shankar

ಬೆಂಗಳೂರು: ಬೆಂಗಳೂರನ್ನು ದೇಶದ ಪ್ರಮುಖ ಕಲಾ ಮತ್ತು ಸಾಂಸ್ಕೃತಿಕ ರಾಜಧಾನಿಯನ್ನಾಗಿ ರೂಪಿಸಲು ಗುರಿ ಹೊಂದಿದ್ದೇವೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಹೇಳಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನವೀಕರಿಸಿದ ಓಪನ್ ಏರ್ ಥಿಯೇಟರ್ ಹಾಗೂ ಶಾಶ್ವತ ಪ್ರದರ್ಶನ ಮಳಿಗೆಗಳ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾ,ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸಲಾಗುತ್ತಿದೆ. ಕರ್ನಾಟಕ ಚಿತ್ರಕಲಾ ಪರಿಷತ್ ಕೇವಲ ಕಲಾಕೃತಿಗಳ ಪ್ರದರ್ಶನದ ಸ್ಥಳವಲ್ಲ. ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನ ಮುಂದೆ ಪರಿಚಯಿಸುವ, ನೇರವಾಗಿ ಕಲಾಸಕ್ತರೊಂದಿಗೆ ಸಂಪರ್ಕ ಸಾಧಿಸುವ ಮತ್ತುತಮ್ಮ ಕಲೆಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಪ್ರಮುಖ ವೇದಿಕೆಯಾಗಿದೆ ಎಂದರು.
ಓಪನ್ ಏರ್ ಥಿಯೇಟರ್,ಶಾಶ್ವತ ಪ್ರದರ್ಶನ ಮಳಿಗೆಗಳ ನಿರ್ಮಾಣದಿಂದ ಚಿತ್ರಸಂತೆ ಸೇರಿ ರಾಷ್ಟ್ರೀಯ,ಅಂತಾರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸಲು ಸಾಧ್ಯವಾಗಲಿದೆ. ನೂತನ ಸೌಲಭ್ಯಗಳ ಮೂಲಕ ಹೆಚ್ಚಿನ ಸಂಖ್ಯೆಯ ಕಲಾವಿದರು, ಕರಕುಶಲ ತಜ್ಞರು ಹಾಗೂ ಕಲಾಸಕ್ತರನ್ನು ಆಕರ್ಷಿಸಲಾಗುತ್ತಿದೆ ಎಂದು ಶಂಕರ್ ವಿವರಿಸಿದರು.
ಇದೇ ವೇಳೆ ‘ಬೆಂಗಳೂರು ಉತ್ಸವ’ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ ಅಲ್ತಾಫ್​​ಖಾನ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್.ಎನ್.ಶಶಿಧರ, ನಟ ಪ್ರಥಮ್ ಮತ್ತು ನಟಿ ಭೂಮಿ ಶೆಟ್ಟಿ ಮತ್ತಿತರರಿದ್ದರು.