ಆಹಾರ ಸುರಕ್ಷತಾಧಿಕಾರಿಗಳು ಕಾರ್ಯಾಚರಣೆ 
ರಾಜ್ಯ

ಕಲಬೆರಕೆ ಬೆಣ್ಣೆ: ಆಹಾರ ಸುರಕ್ಷತಾಧಿಕಾರಿಗಳಿಂದ ಕಾರ್ಯಾಚರಣೆ-food safety

ಬೆಂಗಳೂರು: ರಾಜಧಾನಿ ಬೆಂಗಳೂರು, ಹಾಸನದಲ್ಲಿ ಕಲಬೆರಕೆ ಬೆಣ್ಣೆ ಮಾಡುತ್ತಿರುವ ಅಂಗಡಿಗಳ ಮೇಲೆ ಆಹಾರ ಸುರಕ್ಷತಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಬೆಣ್ಣೆ ಉತ್ಪಾದನೆ ಮತ್ತು ಮಾರಾಟದಲ್ಲಿ ಕೆಲವರು ಅನಧಿಕೃತವಾಗಿ ಇತರ ಪದಾರ್ಥಗಳನ್ನು ಬೆರೆಸಿ ಕಲಬೆರಕೆ ಮಾಡುತ್ತಿರುವ ಕುರಿತು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಎಲ್. ಶಿವಮೂರ್ತಿ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ, ಕಲಬೆರಕೆ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ಮಾರುಕಟ್ಟೆಯಲ್ಲಿ ಗುಣಮಟ್ಟದ ಬೆಣ್ಣೆ ದೊರೆಯುವಂತಾಗಬೇಕು. ಇಲಾಖೆ ಮಾನದಂಡವನ್ನು ವ್ಯಾಪಾರಿಗಳು ಪಾಲಿಸುವುದು ಕಡ್ಡಾಯ. ಆದರೆ, ಹಣದಾಸೆಗೆ ಕೆಲವರು ಬೆಣ್ಣೆಗೆ ಇತರ ಪದಾರ್ಥ ಬೆರೆಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರ ಆರೋಗ್ಯ ಗಮನದಲ್ಲಿಟ್ಟು ಇಂತಹ ಕಲಬೆರಕೆ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಯುಕ್ತರು ಮೆಚ್ಚುಗೆ: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಶ್ರೀನಿವಾಸ್​ ಅವರು, ಆಹಾರ ಸುರಕ್ಷತಾಧಿಕಾರಿಗಳ ಕೈಗೊಂಡಿರುವ ವಿಶೇಷ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಇಲಾಖೆಯಿಂದ ಕಲಬೆರಕೆ ಮಾಡುತ್ತಿರುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಗುಣಮಟ್ಟ ಆಹಾರ ಎಲ್ಲರಿಗೂ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯನ್ಮೂಖವಾಗಿದೆ ಎಂದರು.