ಬೆಂಗಳೂರು: ಹಬ್ಬದ ಹೆಸರಿನಲ್ಲಿ ಮೋಜು-ಮಸ್ತಿ ಮಾಡುತ್ತಾ, ನಡುರಾತ್ರಿ ಪಟಾಕಿ ಸಿಡಿಸಿ, ದೊಡ್ಡದಾಗಿ ಹಾಡನ್ನು ಹಾಕಿ ಸುತ್ತಲಿನ ವಾತಾವರಣವನ್ನು ಕದಡಿದ ಹಿನ್ನಲೆ ಸ್ಯಾಂಡಲ್ವುಡ್ ನಟಿ, ಮಾಜಿ ಸಂಸದೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜನನಿಬಿಡ ಪ್ರದೇಶವಾದ ಫನ್ ವರ್ಲ್ಡ್‌ನಲ್ಲಿ ಮದ್ಯರಾತ್ರಿ 2 ಗಂಟೆ ಸುಮಾರಿಗೆ ಪಟಾಕಿ ಸಿಡಿಸಿ ದಸರಾವನ್ನು ಆಚರಿಸಿರುವ ಘಟನೆ ನಟಿ ರಮ್ಯಾ ಅವರ ಕೋಪಕ್ಕೆ ಕಾರಣವಾಗಿದ್ದು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ರಾತ್ರಿ 10 ಗಂಟೆ ನಂತರ ಯಾವುದೇ ರೀತಿಯ ಪಟಾಕಿ, ಸಿಡಿಮದ್ದು ಸಿಡಿಸುವುದು ಹಾಗೂ ಲೌಡ್ಸ್ಪೀಕರ್ಗಳಲ್ಲಿ ಹಾಡನ್ನು ಹಚ್ಚುವುದು ಕಾನೂನುಬಾಹಿರವಾಗಿದೆ. ಆದರೆ, ಇಲ್ಲಿ ಬೆಳಿಗ್ಗೆ 6 ಗಂಟೆ ವರೆಗೆ ದೊಡ್ಡದಾಗಿ ಹಾಡನ್ನು ಹಚ್ಚಿ, ಪಟಾಕಿ ಸಿಡಿಸಿದ್ದಾರೆಂದು ರಮ್ಯಾ ಆರೋಪಿಸಿದ್ದಾರೆ.
ಹೀಗೆ ಮಾಡುವುದು ಮೊದಲನೆಯದಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್ ನಿಗಧಿತ ಸಮಯದಲ್ಲಿ ಮಾತ್ರ ಪಟಾಕಿ ಮತ್ತು ಹಾಡನ್ನು ಹಚ್ಚಲು ಅನುಮತಿ ನೀಡಿದೆ. ಇಲ್ಲಿ ಇದನ್ನು ಗಾಳಿಗೆ ತೂರಲಾಗಿದೆ. ಅಂತಯೇ, ಇದರಿಂದ ವೃದ್ಧರು, ವಯಸ್ಸಾದವರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ ಎಂಬ ಕನಿಷ್ಟ ಜ್ಞಾನ ಇರಬೇಕು. ಮಾರನೇ ದಿನ ಶಾಲೆಗೆ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವವರಿಗೆ ಈ ಘಟನೆಯಿಂದ ತುಂಬಾ ತೊಂದರೆಯಾಗಿದೆ ಎಂದು ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ನಟಿ, ಮಾಜಿ ಸಂಸದೆ ರಮ್ಯಾ, ನಾನು ಬೆಳಗ್ಗಿನ ಜಾವ 2.30 ರ ಸುಮಾರಿಗೆ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿ ಈ ಘಟನೆಯನ್ನು ವರದಿ ಮಾಡಿದ್ದೇನೆ. ಹಾಗೆಯೇ ಪೊಲೀಸ್ ಆಯುಕ್ತರಲ್ಲಿ ಕೂಡ ದೂರನ್ನು ಸಲ್ಲಿಸಿದ್ದೇನೆ. ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಘಟನೆ ಹಾಗೂ ನಾನು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಜತೆಗೆ ಈ ಘಟನೆಗಳು ಇನ್ನೊಮ್ಮೆ ನಡೆಯದಂತೆ ನೋಡಿಕೊಳ್ಳಬೇಕೆಂದು ವಿನಂತಿಸಿದ್ದಾರೆ, (ಏಜೆನ್ಸೀಸ್).