- ವಿಶ್ವವಿಖ್ಯಾತ ನಾಡಹಬ್ಬ, ಮೈಸೂರು ದಸರಾ ಉತ್ಸವ 2026
- ದಸರಾ ಉತ್ಸವಕ್ಕೆ 12 ಆನೆಗಳ ಪಟ್ಟಿಯನ್ನು ಪ್ರಕಟಿಸಿದ ಅರಣ್ಯ ಇಲಾಖೆ
- ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯ್ಕೆಯಿಂದ ಕೈಬಿಡಲಾಗಿದೆ
ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ, ಮೈಸೂರು ದಸರಾ ಉತ್ಸವಕ್ಕೆ 12 ಆನೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಂಬಾರಿ ಹೊರುತ್ತಿದ್ದ ಅಭಿಮನ್ಯುವನ್ನು ಕೈ ಬಿಟ್ಟಿರುವ ಅರಣ್ಯ ಇಲಾಖೆ, ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಹೊಸ ಆನೆಯೇ ಅಂಬಾರಿ ಹೊರಲಿದೆ ಎಂದು ಸ್ಪಷ್ಟಪಡಿಸಿದೆ.
ಅರಣ್ಯ ಇಲಾಖೆ ಮಾಹಿತಿ ಪ್ರಕಾರ, ಧನಂಜಯ, ಮಹೇಂದ್ರ, ಸುಗ್ರೀವ ಅಥವಾ ಪ್ರಶಾಂತ ಈ ನಾಲ್ಕು ಆನೆಗಳ ಪೈಕಿ ಒಂದು ಈ ಬಾರಿ ತಾಯಿ ಚಾಮುಂಡಿ ಇರುವ ಚಿನ್ನದ ಅಂಬಾರಿಯನ್ನು ಹೊರಲಿದೆ. 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಹೊರಲು ಅಭಿಮನ್ಯುವನ್ನು ಪರಿಗಣಿಸಿಲ್ಲ ಎಂದು ತಿಳಿಸಲಾಗಿದೆ. ಇದೇ ಆ.26ರಂದು ದಸರಾ ಗಜಪಯಣ ಆರಂಭವಾಗಲಿದ್ದು, ಮೊದಲ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಆಗಮಿಸಲಿವೆ.
ಆರು ವರ್ಷಗಳ ಕಾಲ ಅಂದರೆ 2020ರಿಂದ 2025ರ ವರೆಗೆ ನಿರಂತರವಾಗಿ ಚಿನ್ನದ ಅಂಬಾರಿಯನ್ನು ಹೊತ್ತು ಮೈಸೂರಿಗರ ಅಚ್ಚುಮೆಚ್ಚಿನ ಕ್ಯಾಪ್ಟನ್ ಆಗಿದ್ದ ಅಭಿಮನ್ಯುಗೆ ದಸರಾದಲ್ಲಿ ಬರೋಬ್ಬರಿ 25 ವರ್ಷಗಳ ಇತಿಹಾಸವಿದೆ. ಇಂತಹ ದಿಗ್ಗಜ ಆನೆಗೆ ಕಳೆದ ಏಪ್ರಿಲ್ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಈ ಬಾರಿಯ ದಸರಾ ಉತ್ಸವದಿಂದ ಅಭಿಮನ್ಯುವನ್ನು ಕೈಬಿಟ್ಟಿದೆ.
ದಸರಾದಲ್ಲಿ ಪಾಲ್ಗೊಳ್ಳುವ 12 ಆನೆಗಳಿವು
ಸಾಂಸ್ಕೃತಿಕ ನಗರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿರುವ ದಸರಾ ಮಹೋತ್ಸವದ ಅದ್ಧೂರಿ ಹಾಗೂ ವಿಜೃಂಭಣೆಯ ಮೆರವಣಿಗೆಯಲ್ಲಿ ಈ ಬಾರಿ 12 ಆನೆಗಳು ಸನ್ನದ್ಧವಾಗಿವೆ. ಈ ಪೈಕಿ, ಧನಂಜಯ, ಏಕಲವ್ಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮಿ, ಕಾವೇರಿ, ರೂಪ, ಚೈತ್ರ ಹಾಗೂ ಶ್ರೀಕಂಠ ಆನೆಗಳಿವೆ. ಇನ್ನು, ತುರ್ತು ಹಾಗೂ ಅನುಪಸ್ಥಿತಿಯ ಕಾರಣಗಳಿಗಾಗಿ ಬಲಿಷ್ಠ ಆನೆಗಳಾದ ಭೀಮ ಮತ್ತು ಹರ್ಷನನ್ನು ಅರಣ್ಯ ಇಲಾಖೆಯು ಮೀಸಲು ಪಡೆಯಾಗಿ ತಂಡಕ್ಕೆ ಸೇರಿಸಿಕೊಂಡಿದೆ.