ಕನ್ನಡ ಪುಸ್ತಕ ಪ್ರಾಧಿಕಾರದಿಂದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಹೊಸ ಪ್ರಶಸ್ತಿಗಳ ಪಟ್ಟಿ ಪ್ರಕಟ 
ರಾಜ್ಯ

ಮನೆಗೊಂದು ಗ್ರಂಥಾಲಯ ಯೋಜನೆಗೆ ಉತ್ತೇಜನ: ಕನ್ನಡ ಪುಸ್ತಕ ಪ್ರಾಧಿಕಾರದಿಂದ 4 ಹೊಸ ಪ್ರಶಸ್ತಿಗಳ ಘೋಷಣೆ; 2025 ನೇ ಸಾಲಿನ ವಿಜೇತರ ಪಟ್ಟಿ ಪ್ರಕಟ! Kannada Book Authority

ಪ್ರಮುಖ ಮುಖ್ಯಾಂಶಗಳು

  • 'ಮನೆಗೊಂದು ಗ್ರಂಥಾಲಯ' ಯೋಜನೆಗೆ ಉತ್ತೇಜನ
  • ಕನ್ನಡ ಪುಸ್ತಕ ಪ್ರಾಧಿಕಾರದಿಂದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಹೊಸ ಪ್ರಶಸ್ತಿಗಳ ಪಟ್ಟಿ ಪ್ರಕಟ
  • ಡಾ. ಪಿ.ಆರ್. ತಿಪ್ಪೇಸ್ವಾಮಿ, ಶ್ರೀಮತಿ ನಂಜನಗೂಡು ತಿರುಮಲಾಂಬ, ಗಳಗನಾಥ ಹಾಗೂ ಡಾ. ಹಾ.ಮಾ. ನಾಯಕ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ
  • ಶ್ರೀ ಆಶಿಕ್ ಶಂಕರಘಟ್ಟ, ಡಾ. ಬೆಟ್ಟಸ್ವಾಮಿ ಹೆಚ್.ಬಿ., ಶ್ರೀ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ ಹಾಗೂ ಡಾ. ಶೈಲಜಾ ಎನ್. ಬಾಗೇವಾಡಿಗೆ ನೂತನ ಪ್ರಶಸ್ತಿ ವಿತರಣೆ
ಬೆಂಗಳೂರು: ಮಂಗಳವಾರ (ಆಗಸ್ಟ್.4) ಕನ್ನಡ ಪುಸ್ತಕ ಪ್ರಾಧಿಕಾರ (Kannada Book Authority) ದಿಂದ ಪ್ರಸಕ್ತ ವರ್ಷದಿಂದ ಜಾರಿಗೆ ಬರುವಂತೆ ನಾಲ್ಕು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಿ ಘೊಷಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಹೇಳಿದ್ದಾರೆ.
ಪುಸ್ತಕ ಪ್ರಾಧಿಕಾರ ಅನುಷ್ಠಾನಗೊಳಿಸಿ ಜಾರಿಗೊಳಿಸುತ್ತಿರುವ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಡಿಯಲ್ಲಿ ವಿಶಿಷ್ಟ ಹಾಗೂ ಉತ್ತಮ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸಿದವರಿಗೆ ಕನ್ನಡದ ಶ್ರೇಷ್ಠ ಬರಹಗಾರರ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ನೀಡಲಾಗುವುದು, ಪ್ರಶಸ್ತಿ ಜೊತೆಗೆ ತಲಾ 25 ಸಾವಿರ ಗೌರವ ಧನವನ್ನು ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ನಾಲ್ಕು ಪ್ರಶಸ್ತಿಗಳನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಒಂದರಂತೆ ನೀಡಲಾಗುತ್ತಿದ್ದು, ಡಾ. ಪಿ.ಆರ್. ತಿಪ್ಪೇಸ್ವಾಮಿ, ಶ್ರೀಮತಿ ನಂಜನಗೂಡು ತಿರುಮಲಾಂಬ, ಗಳಗನಾಥ ಹಾಗೂ ಡಾ. ಹಾ.ಮಾ. ನಾಯಕ ಅವರ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಡಾ. ಮಾನಸ ತಿಳಿಸಿದ್ದಾರೆ.
2025ನೇ ಸಾಲಿನ ಡಾ. ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿಗೆ ಶಿವಮೊಗ್ಗದ ಶ್ರೀ ಆಶಿಕ್ ಶಂಕರಘಟ್ಟ (ಬೆಂಗಳೂರು ವಿಭಾಗ), ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ಮೈಸೂರಿನ ಡಾ. ಬೆಟ್ಟಸ್ವಾಮಿ ಹೆಚ್.ಬಿ. (ಮೈಸೂರು ವಿಭಾಗ), ಗಳಗನಾಥ ಪ್ರಶಸ್ತಿಗೆ ಹಾವೇರಿಯ ಶ್ರೀ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ, (ಬೆಳಗಾವಿ ವಿಭಾಗ) ಹಾಗೂ ಡಾ. ಹಾ.ಮಾ. ನಾಯಕ ಪ್ರಶಸ್ತಿಗೆ ಕಲಬುರಗಿಯ ಡಾ. ಶೈಲಜಾ ಎನ್. ಬಾಗೇವಾಡಿ (ಕಲಬುರಗಿ ವಿಭಾಗ) ಭಾಜನರಾಗಿದ್ದಾರೆ.

ಈ ಪ್ರಶಸ್ತಿಗಳನ್ನು ಪುಸ್ತಕ ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಪ್ರದಾನ ಮಾಡಲಾಗುವುದು ಹಾಗೂ ಪ್ರಶಸ್ತಿ ಪ್ರದಾನ ದಿನಾಂಕವನ್ನ ಸಧ್ಯದಲ್ಲಿಯೇ ತಿಳಿಸಲಾಗುವುದು ಎಂದು ಡಾ. ಮಾನಸ ತಿಳಿಸಿದ್ದಾರೆ.