4YearOld Attacked By Stray Dog In Karnataka Raichur
ರಾಯಚೂರು: ಕಳೆದ ಕೆಲವು ದಿನದ ಹಿಂದೆಯಷ್ಟೇ ಒಂದು ವರ್ಷದ ಬಾಲಕಿ ಬೀದಿ ನಾಯಿಗಳ ದಾಳಿಗೆ ಒಳಗಾಗಿ ರಾಯಚೂರಿನಲ್ಲಿ ಮೃತಪಟ್ಟಿದ್ದ ಘಟನೆ ಬೆಳಕಿಗೆ ಬಂದಿತ್ತು. ಆ ಪ್ರಕರಣ ಮಾಸುವ ಮುನ್ನವೇ ಮಲಿಯಾಬಾರ್ನ ಗ್ರಾಮದ ಬಳಿ ನಾಲ್ಕು ವರ್ಷದ ಗೋಪಾಲ್ ಎನ್ನುವ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ನಾಲ್ಕು ವರ್ಷದ ಗೋಪಾಲ್ ಸೋಮವಾರ ತನ್ನ ಮನೆ ಸಮೀಪ ಆಟವಾಡುತ್ತಿದ್ದ. ಈ ವೇಳೆ ಬೀದಿ ನಾಯಿಗಳು ಏಕಾಏಕಿ ಆತನ ಮೇಲೆ ಎರಗಿವೆ. ಇದರಿಂದಾಗಿ ಬಾಲಕನ ತಲೆಗೆ ಗಂಭೀರಗಾಯವಾಗಿದ್ದು, ತಲೆ ಚರ್ಮಕ್ಕೆ ತೀವ್ರ ಹಾನಿಯಾಗಿದೆ. ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರದುರ್ಗದಲ್ಲಿ ನಾಲ್ವರು ಮಕ್ಕಳ ಮೇಲೆ ದಾಳಿ
ಚಿತ್ರದುರ್ಗದಲ್ಲಿಯೂ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಮನೆ ಮುಂದೆ ಆಡುತ್ತಿದ್ದ ನಾಲ್ವರು ಮಕ್ಕಳ ಮೇಲೆ ದಾಳಿ ಮಾಡಲಾಗಿದೆ. ಚೇಳಗುಡ್ಡ ಹಾಗೂ ನೆಹರು ನಗರ ಬಡಾವಣೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಐದರಿಂದ ಆರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲೀನಾ, ಆದಿಲ್, ಮನ್ವಿತ್ ಸೇರಿದಂತೆ ನಾಲ್ವರು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಒಂದೂವರೆ ವರ್ಷದ ಬಾಲಕಿ ಸಾವು
ಮನೆಯ ಹೊರಗೆ ಆಡುತ್ತಿದ್ದಾ ಬೀದಿ ನಾಯುಗಳ ಗುಂಪೊಂದು ಬುಧವಾರ (ಜುಲೈ 15)ರಂದು ಒಂದೂವರೆ ವರ್ಷದ ಬಾಲಕಿ ಮೇಲೆ ದಾಳಿ ನಡೆಸಿದ್ದವು. ನಾಲ್ಕರಿಂದ ಐದು ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿ ಹಲವು ಬಾರಿ ಕಚ್ಚಿವೆ, ಇದರಿಂದಾಗಿ ಮಗು ತೀವ್ರವಾಗಿ ಗಾಯಗೊಂಡ ಪರಿಣಾಮ ಮಗು ಸಾವನ್ನಪ್ಪಿತ್ತು . ಈ ಘಟನೆ ರಾಯಚೂರು ಜಿಲ್ಲೆಯ ಹಂಚಿನಾಲ್ ಕ್ಯಾಂಪ್‌ನಲ್ಲಿ ನಡೆದಿತ್ತು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಕ್ರಮಕ್ಕೆ ಆಗ್ರಹ
ನಿರಂತರವಾಗಿ ಮಕ್ಕಳ ಮೇಲೆ ಬೀದಿ ನಾಯಿಗಳ ಹಾವಳಿಯಾಗುತ್ತಿರುವುದರ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಪುರಸಭೆ ಹಾಗೂ ಆರೋಗ್ಯಾಧಿಕಾರಿಗಳು ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸುವ ಕ್ರಮ ಕೈಗೊಳ್ಳಬೇಕು,. ನಿತ್ಯ ಮಕ್ಕಳು ಆಟವಾಡಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ಅಭಯದಿಂದ ತೆರಳಲು ಆಗುತ್ತಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಚಿತ್ರದುರ್ಗದ ಜಿಲ್ಲಾಡಳಿತ ಆಸ್ಪತ್ರೆಯಲ್ಲಿ ನಾಯಿ ಕಡಿತ ತಡೆಗೆ ಯಾವುದೇ ಇಂಜೆಕ್ಷನ್ ಲಭ್ಯವಿರಲಿಲ್ಲ. ಇಂತಹ ಗಂಭೀರ ವಿಚಾರಗಳ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು, (ಏಜೆನ್ಸೀಸ್).