ಹುಡುಗರ ವೇಷ ಧರಿಸಿ ಕಳ್ಳತನ ಮಾಡ್ತಿದ್ದ ಕಳ್ಳಿಯರು ಅರೆಸ್ಟ್
- ಹುಡುಗರ ವೇಷ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯರು ಅರೆಸ್ಟ್
- ಶಾಲು ಹಾಗೂ ನೀಲು ಹೆಸರಿನ ಇಬ್ಬರು ಖತರ್ನಾಕ್ ಲೇಡಿ ಕಳ್ಳಿಯರ ಬಂಧನ
- ಹಾಡಹಗಲಿನಲ್ಲೇ ಮನೆಗಳಿಗೆ ಕನ್ನ ಹಾಕುತ್ತಿದ್ದವರನ್ನು ಬಂಧಿಸಿದ ಸಂಪಿಗೆಹಳ್ಳಿ ಪೊಲೀಸರು
ಬೆಂಗಳೂರು: ಹುಡುಗರ ವೇಷ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯರನ್ನು ( Women Disguise ) ಬೆಂಗಳೂರು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಸಂಪಿಗೆಹಳ್ಳಿ ಪೊಲೀಸರು ಶಾಲು ಹಾಗೂ ನೀಲು ಹೆಸರಿನ ಇಬ್ಬರು ಖತರ್ನಾಕ್ ಲೇಡಿ ಕಳ್ಳಿಯರನ್ನು ಅರೆಸ್ಟ್ ಮಾಡಿದ್ದಾರೆ. ಈ ಇಬ್ಬರು ಹಾಡಹಗಲಿನಲ್ಲೇ ಮನೆಗಳಿಗೆ ಕನ್ನ ಹಾಕುತ್ತಿದ್ದರು.
ಇದೇ ಜನವರಿ 13 ರಂದು ಯಲಹಂಕ ಬಳಿಯ ಅಗ್ರಹಾರ ಲೇಔಟ್ನಲ್ಲಿರುವ ಆಟೋ ಚಾಲಕ ಸಂಗಮೇಶ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಸಂಗಮೇಶ್ ಅವರು ಹೊರ ಹೋಗಿದ್ದ ವೇಳೆ ಕಳ್ಳಿಯರು ಈ ಕೃತ್ಯ ಎಸಗಿದ್ದರು. ಮಾಲೀಕ ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತು.
ಕಳ್ಳತನ ನಡೆದಿರೋದು ಗೊತ್ತಾದ ಬೆನ್ನಲ್ಲೇ ಸಂಗಮೇಶ್ ಅವರು ಸಂಪಿಗೆಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದರು. ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದಾಗ ಸಿಸಿಟಿವಿ ದೃಧ್ಯಗಳು ಲಭ್ಯವಾಯಿತು. ಬಳಿಕ ಸಿಸಿಟಿವಿ ದೃಶ್ಯಗಳನ್ನು ಆಧಾರಿಸಿ ಹಾಗೂ ಬೈಕ್ ನಂಬರ್ ಸಹಾಯದಿಂದ ಆರೋಪಿಗಳನ್ನು ಬಂಧಿಸಿದರು.
ಖದೀಮರನ್ನು ಬಂಧನ ಮಾಡಿ ಠಾಣೆಗೆ ಕರೆತಂದಾಗ ಅವರು ಹುಡುಗರಲ್ಲ, ಶಾಲು ಮತ್ತು ನೀಲು ಎಂಬ ಇಬ್ಬರು ಹುಡಗಿಯರು ಅನ್ನೋದು ಗೊತ್ತಾಯಿತು. ಈ ಇಬ್ಬರು ಖದೀಮರು ಟ್ಯಾನರಿ ರಸ್ತೆಯ ನಿವಾಸಿಗಳಾಗಿದ್ದಾರೆ. ಸದ್ಯ ಇಬ್ಬರನ್ನು ಸಂಪಿಗೆಹಳ್ಳಿ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.