ಬೆಂಗಳೂರು: ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಜತೆ ವಿಡಿಯೋ ಸಂವಾದ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಪ್ರಕಟಿಸಿದರು.
ನಾಳೆಯಿಂದ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳು ಕರೊನಾ ವೈರಸ್ ಸೋಂಕು ಇಲ್ಲದ ಇತರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕು. ಕೋವಿಡ್-19 ರೋಗಿಗಳಿಗಾಗಿ ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ವಾರ್ಡ್ ತೆರೆಯಬೇಕು. ಸೋಂಕು ಹರಡಿರುವುದು ಪತ್ತೆಯಾದರೆ ಅವರನ್ನು ಪ್ರತ್ಯೇಕ ವಾರ್ಡ್ನಲ್ಲಿ ಇರಿಸಿ ನಂತರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಬೇಕು. ಸೋಂಕು ಹರಡಿರುವವರು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳಿಗೆ ಬಂದರೆ ಅವುಗಳನ್ನು ಸೀಲ್ಡೌನ್ ಮಾಡದೆ ಇಡೀ ಆಸ್ಪತ್ರೆಯನ್ನು ಸೋಂಕು ನಿವಾರಕ ಬಳಸಿ ಸ್ವಚ್ಛಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಮನೆಯಲ್ಲಿ ಕ್ವಾರಂಟೈನ್: ಕರೊನಾ ಸೋಂಕು ತಗುಲಿದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ವೈದ್ಯರನ್ನು ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇಡಲಾಗುವುದು. ಗರ್ಭಿಣಿಯರು ಕಂಟೈನ್ ಮೆಂಟ್ ಝೋನ್ ನಿಂದ ಬಂದರೆ ಮಾತ್ರ ಅವರನ್ನು ಕೋವಿಡ್ ತಪಾಸಣೆ ಮಾಡಬೇಕು. ಇಲ್ಲದಿದ್ದರೆ ಅವರನ್ನು ತಪಾಸಣೆಗೆ ಒಳಪಡಿಸುವ ಅಗತ್ಯ ಇಲ್ಲ ಎಂದು ಸಚಿವರು ಮಾಹಿತಿ ನೀಡಿದರು.
ಸಚಿವರ ಮನವಿಗೆ ಸ್ಪಂದಿಸಿದ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ನಾಳೆಯಿಂದ ಸೇವೆ ನೀಡುವುದಾಗಿ ಒಪ್ಪಿಗೆ ನೀಡಿವೆ. ಅಲ್ಲದೆ ಮುಂದಿನ ದಿನಗಳಲ್ಲಿ ಕರೊನಾ ವೈರಸ್ ಸೋಂಕು ತೀವ್ರಗೊಂಡರೆ ಸರ್ಕಾರದ ಜತೆ ಕೈಜೋಡಿಸುವುದಾಗಿ ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.