ನ್ಯೂಸ್

ಸಿಬಿಐ ತನಿಖೆಯ ಸುತ್ತ: ಪೂರ್ವಾನುಮತಿ ಇಲ್ಲದಿದ್ದರೂ ಸಿಬಿಐ ತನಿಖೆ ಅಮಾನ್ಯವಲ್ಲ

ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯಾದ ಸಿಬಿಐ ಬಗ್ಗೆ ಕಾಲಾನುಕಾಲಕ್ಕೆ ಚರ್ಚೆ, ವಿವಾದ ಆಗುತ್ತಲೇ ಇರುತ್ತದೆ. ವಿಪಕ್ಷಗಳು ಅದನ್ನು ‘ಆಳುವ ಪಕ್ಷದ ಕೈಗೊಂಬೆ’ಎಂದು ಜರಿದರೆ, ‘ನ್ಯಾಯದ ಹಾದಿಯಲ್ಲಿ ನಡೆಯುವವರಿಗೆ ಹೆದರಿಕೆ ಏಕೆ?’ಎಂದು ಆಡಳಿತಾರೂಢ ಪಕ್ಷ ಸಮರ್ಥಿಸಿಕೊಳ್ಳುತ್ತದೆ. ಈಚೆಗೆ ಕೆಲ ರಾಜ್ಯಗಳು, ಸಿಬಿಐ ತನಿಖೆಗೆ ತಮ್ಮ ಅನುಮತಿ ಅಗತ್ಯ ಎಂಬ ನಿಯಮ ಮಾಡಿಕೊಂಡಿವೆ. ಈ ಎಲ್ಲದರ ಬಗ್ಗೆ ಒಂದು ಅವಲೋಕನ.

ಕೇಂದ್ರೀಯ ತನಿಖಾ ಸಂಸ್ಥೆ (ಸಿವಿಐ) ಯಾವುದೇ ರಾಜ್ಯದಲ್ಲಿ ತನಿಖೆ ನಡೆಸಬೇಕೆಂದರೆ ಸಂಬಂಧಪಟ್ಟ ರಾಜ್ಯ ಸರ್ಕಾರದ ಅನುಮತಿ ಪಡೆದೇ ತನಿಖೆಗೆ ಮುಂದಾಗಬೇಕು. ಪೂರ್ವಾನುಮತಿ ಇಲ್ಲದೆ ತನ್ನ ಅಧಿಕಾರ ಅಥವಾ ಕಾರ್ಯವ್ಯಾಪ್ತಿಯನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಆದರೆ, ಪೂರ್ವಾನುಮತಿ ಇಲ್ಲದೆ ನಡೆಸಿದ ತನಿಖೆಯು ಆರೋಪಿ ಬಗ್ಗೆ ಪೂರ್ವಗ್ರಹಗಳನ್ನು ಹೊಂದಿಲ್ಲವಾದಲ್ಲಿ, ಆ ತನಿಖೆಯನ್ನು ಅಮಾನ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾ.ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾ. ಬಿ.ಆರ್. ಗವಾಯಿ ದ್ವಿಸದಸ್ಯ ಪೀಠ ಸ್ಪಷ್ಟಪಡಿಸುವ ಮೂಲಕ, ಚಾಲ್ತಿಯಲ್ಲಿರುವ ದಿಲ್ಲಿ ವಿಶೇಷ ಪೊಲೀಸ್ ಕಾರ್ಯಸಂಸ್ಥೆ ಕಾಯ್ದೆ-1946ನ್ನು ಎತ್ತಿಹಿಡಿದಿದೆ.

ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಫೆರ್ಟಿಕೋ ಮಾರ್ಕೆಟಿಂಗ್ ಅಂಡ್ ಇನ್​ವೆಸ್ಟ್​ಮೆಂಟ್ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆಗಳ ನಡುವೆ ನಡೆದ ಇಂಧನ ಪೂರೈಕೆ ಒಪ್ಪಂದದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ರಾಮ್ ಜೀ ಸಿಂಗ್ ಮತ್ತು ಯೋಗೇಂದ್ರನಾಥ್ ಪಾಂಡೆ ಎಂಬ ಇಬ್ಬರು ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಸಿಬಿಐ ತನಿಖೆ ನಡೆಸಲು 2012ರಲ್ಲಿ ಅಂದಿನ ರಾಜ್ಯ ಸರ್ಕಾರ ಅನುಮತಿ (ಜಛ್ಞಿಛ್ಟಿಚ್ಝ ್ಚ್ಞಛ್ಞಿಠಿ) ನೀಡಿತ್ತು. ಆದರೆ, ದಿಲ್ಲಿ ವಿಶೇಷ ಪೊಲೀಸ್ ಕಾರ್ಯಸಂಸ್ಥೆ ಕಾಯ್ದೆ-1946ರ (ಡಿಎಸ್​ಪಿಇ) ಸೆಕ್ಷನ್ 6ರ ಅಡಿಯಲ್ಲಿ 2018ರಲ್ಲಿ ನೋಟಿಫಿಕೇಷನ್ ಮೂಲಕ ಸಿಬಿಐ ತನಿಖೆಗೆ ಪೋಸ್ಟ್ ಫ್ಯಾಕ್ಟೋ ಅನುಮತಿ (ತನಿಖಾ ಪ್ರಗತಿಯ ಹಂತದಲ್ಲಿ ನೀಡುವ ಅನುಮತಿ) ನೀಡಿತ್ತು. ಇದನ್ನು ಪ್ರಶ್ನಿಸಿ ಈ ಇಬ್ಬರು ಅಧಿಕಾರಿಗಳು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಕ್ರಮವೆಸಗಿದ ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಪೋಸ್ಟ್ ಫ್ಯಾಕ್ಟೋ ಅನುಮತಿ ಕ್ರಮಬದ್ಧ ಎನ್ನುವುದು ಸಿಬಿಐ ಪ್ರತಿಪಾದನೆಯಾಗಿತ್ತು.

ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಎಫ್​ಐಆರ್​ನಲ್ಲಿ ಈ ಇಬ್ಬರು ಅಧಿಕಾರಿಗಳ ಹೆಸರು ದಾಖಲಾಗದಿದ್ದರೂ, ಚಾರ್ಜ್​ಶೀಟ್​ನಲ್ಲಿ ಅವರ ಪಿತೂರಿ ಬಗ್ಗೆ ದಾಖಲಾಗಿತ್ತು. ಅಲ್ಲದೆ, ಅರ್ಜಿದಾರರು ತನಿಖೆಯ ಪೂರ್ವಗ್ರಹಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖ ಮಾಡಿಲ್ಲ. ಹೀಗಾಗಿ, ಸದರಿ ಪ್ರಕರಣದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದನ್ನು ಪುರಸ್ಕರಿಸಿರುವ ಸುಪ್ರೀಂಕೋರ್ಟ್, ಡಿಎಸ್​ಪಿಇ ಕಾಯ್ದೆಯ ಸೆಕ್ಷನ್ 5ರ ಪ್ರಕಾರ ಕೇಂದ್ರ ಸರ್ಕಾರಕ್ಕೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಬಿಐ ಅಧಿಕಾರ ವ್ಯಾಪ್ತಿ ವಿಸ್ತರಿಸಲು ಅನುವು ಮಾಡಿಕೊಟ್ಟರೂ, ಸೆಕ್ಷನ್ 6ರ ಅಡಿ ಅಧಿಕಾರ ವಿಸ್ತರಣೆಗೆ ರಾಜ್ಯ ಸರ್ಕಾರದ ಅನುಮತಿ ಬೇಕು. ಸಂವಿಧಾನದ ಮೂಲ ರಚನೆಗಳಲ್ಲಿ ಒಂದಾಗಿರುವ ನಿಬಂಧನೆಗಳು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಸ್ವರೂಪಕ್ಕೆ ಅನುಗುಣವಾಗಿರುತ್ತವೆ ಎಂದು ಹೇಳಿದೆ.

ಈ ಪ್ರಕರಣದಲ್ಲಿ - 2011ರಲ್ಲಿ ಫೆರ್ಟಿಕೋ ಸಂಸ್ಥೆ ಮೇಲೆ ಸಿಬಿಐ ದಾಳಿ ನಡೆಸಿದ್ದ ಸಂದರ್ಭದಲ್ಲಿ ಇಂಧನ ಪೂರೈಕೆ ಒಪ್ಪಂದದಡಿಯಲ್ಲಿ ಖರೀದಿಸಲಾಗಿದ್ದ ಕಲ್ಲಿದ್ದಲನ್ನು ಬ್ಲಾ್ಯಕ್ ಮಾರ್ಕೆಟ್​ನಲ್ಲಿ ಮಾಡಿರುವುದು ಕಂಡುಬಂದಿತ್ತು. ಅಲ್ಲದೆ, ಇದರಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 36 ಕೋಟಿ ರೂ. ನಷ್ಟವಾಗಿತ್ತು. ಇಬ್ಬರು ಅಪರಿಚಿತ ಸರ್ಕಾರಿ ಅಧಿಕಾರಿಗಳ ಕಣ್ಗಾವಲಿನಲ್ಲೇ ಈ ಕೃತ್ಯ ನಡೆದಿದೆ ಎಂದು ಸಿಬಿಐ ಸಂಶಯಿಸಿತ್ತು. ಆ ಇಬ್ಬರು ಅಧಿಕಾರಿಗಳ ಹೆಸರನ್ನು ನಂತರ ಚಾರ್ಜ್​ಶೀಟ್​ನಲ್ಲಿ ದಾಖಲು ಮಾಡಲಾಗಿತ್ತು. ತಮ್ಮ ವಿರುದ್ಧದ ತನಿಖೆಗೆ ಸಿಬಿಐ ಕಾನೂನುಬದ್ಧ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ ಎನ್ನುವುದು ಅಧಿಕಾರಿಗಳ ತಕರಾರು.

ಸಾಮಾನ್ಯವಾಗಿ, ಸರ್ಕಾರಿ ಸಿಬ್ಬಂದಿ ವಿರುದ್ಧ ಸಿಬಿಐ ತನಿಖೆ ನಡೆಸಲು ಆಯಾ ಸರ್ಕಾರದ ಅನುಮತಿ ಬೇಕು. ಈ ತೀರ್ಪಿನ ಪ್ರಕಾರ, ತನಿಖೆಯ ಹಂತದಲ್ಲಿ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿ, ತನಿಖೆ ಮಾಡಲಾಗಿದ್ದರೆ, ತನಿಖೆಯ ನಂತರದಲ್ಲಿ ಸರ್ಕಾರದ ಅನುಮತಿ ಪಡೆದುಕೊಳ್ಳಬಹುದು ಎಂಬುದಾಗಿದೆ. ಸದರಿ ಪ್ರಕರಣದಲ್ಲಿ ಸಿಬಿಐನ ಈ ವಾದವನ್ನು ಉತ್ತರ ಪ್ರದೇಶ ಸರ್ಕಾರವೂ ಬೆಂಬಲಿಸಿತ್ತು.

ಸಿಬಿಐಗೆ ರಾಜ್ಯಗಳ ಲಗಾಮು : ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ವಿಪಕ್ಷಗಳ ಮನೋಬಲ ಕುಗ್ಗಿಸಲೆಂದೇ ಸಿಬಿಐ ಅನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸರ್ಕಾರಗಳು ‘ಸರ್ಕಾರದ ಅನುಮತಿಯಿಲ್ಲದೆ ಸಿಬಿಐಗೆ ರಾಜ್ಯ ಪ್ರವೇಶಿಸುವ ಅಧಿಕಾರವಿಲ್ಲ’ ಎಂಬ ನಿಯಮವನ್ನು ಜಾರಿಗೆ ತಂದಿವೆ. ಪಂಜಾಬ್, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ತಾನ, ಛತ್ತೀಸ್​ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಈಗಾಗಲೇ ಈ ಕ್ರಮ ಜಾರಿಯಲ್ಲಿದೆ. ಇದರ ಪ್ರಕಾರ ಸರ್ಕಾರಿ ಅಥವಾ ಖಾಸಗಿ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಲು ಸರ್ಕಾರದ ಪೂರ್ವಾನುಮತಿ ಅತ್ಯಗತ್ಯ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಹಿಂದಿನ ಆಂಧ್ರಪ್ರದೇಶ ಸರ್ಕಾರ ಇಂಥದ್ದೊಂದು ನಿಯಮವನ್ನು ಮೊದಲಿಗೆ ಜಾರಿಗೆ ತಂದಿತ್ತು. ಆದರೆ, ಜಗನ್ ಮೋಹನ್ ರೆಡ್ಡಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಚಂದ್ರಬಾಬು ನಾಯ್ಡು ಸರ್ಕಾರದ ಕ್ರಮವನ್ನು ರದ್ದುಗೊಳಿಸಿತ್ತು. ಕೇರಳದಲ್ಲಿ ಕೋಲಾಹಲವೆಬ್ಬಿಸಿರುವ ಚಿನ್ನ ಅಕ್ರಮ ಸಾಗಣೆ ಪ್ರಕರಣದ ತನಿಖೆಯಲ್ಲಿ ಸಿಬಿಐ ತನ್ನ ಕಾರ್ಯವ್ಯಾಪ್ತಿ ಮೀರಿ ವರ್ತಿಸುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

ಸ್ವಯಂಪ್ರೇರಿತವಾಗಿ ಕೇಸುಗಳನ್ನು ಕೈಗೆತ್ತಿಕೊಳ್ಳಬಹುದೇ?

ದಿಲ್ಲಿ ವಿಶೇಷ ಪೊಲೀಸ್ ಕಾರ್ಯಸಂಸ್ಥೆ ಕಾಯ್ದೆ-1946ರ (ಡಿಎಸ್​ಪಿಇ) ಸೆಕ್ಷನ್ 2ರಲ್ಲಿ ತಿಳಿಸಿರುವಂತೆ ವ್ಯಕ್ತಿಗಳ ಮೇಲೆ ಕೇಸುಗಳು ಡಿಎಸ್​ಪಿಇ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ದಾಖಲಾಗಿದ್ದರೆ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಬಿಐ ಸ್ವಯಂಪ್ರೇರಿತವಾಗಿ, ಪೂರ್ವಾನುಮತಿ ಇಲ್ಲದೆ ತನಿಖೆ ಕೈಗೆತ್ತಿಕೊಳ್ಳಬಹುದು. ಡಿಎಸ್​ಪಿಇ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ರಾಜ್ಯಗಳಲ್ಲಿ ಸಿಬಿಐ ತನಿಖೆ ನಡೆಸಬೇಕೆಂದರೆ ಆಯಾ ರಾಜ್ಯ ಸರ್ಕಾರಗಳ ಪೂರ್ವಾನುಮತಿ ಪಡೆದುಕೊಳ್ಳುವುದು ಅವಶ್ಯಕ. ಹಾಗಿದ್ದರೂ, ನಿರ್ದಿಷ್ಟ ಸಂಸ್ಥೆ ಅಥವಾ ವ್ಯಕ್ತಿಗಳ ಅಕ್ರಮದ ವಿರುದ್ಧದ ತನಿಖೆಗೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳ ಅನುಮತಿ ಪಡೆಯದೆಯೇ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬಹುದಾಗಿದೆ.

‘ಬಡವರನ್ನು ಮರೆಯಬೇಡ, ನಿನ್ನ ಮೋಕ್ಷಕ್ಕಾಗಿಯಷ್ಟೇ ಪ್ರಯತ್ನ ಮಾಡಿದರೆ ನೀನು ನರಕಕ್ಕೆ ಹೋಗುವೆ, ಮತ್ತೊಬ್ಬರ ಮುಕ್ತಿಗಾಗಿ ಪ್ರಯತ್ನಿಸಿದಾಗಷ್ಟೇ ನಿನಗೆ ಮೋಕ್ಷ! ಯಾರು ಇತರರಿಗಾಗಿ ಬದುಕುತ್ತಾರೋ ಅವರದ್ದೇ ಜೀವನ, ಉಳಿದವರು ಬದುಕಿದ್ದರೂ ಸತ್ತಂತೆ’ ಎಂಬ ಸ್ವಾಮಿ ವಿವೇಕಾನಂದರ ಉಕ್ತಿ ಸದಾ ಸ್ಮರಣಾರ್ಹ.