ನ್ಯೂಸ್

ಮುಡಾ ಹಳೇ ವ್ಯವಸ್ಥೆ ಜಾರಿಗೆ ರಾಜ್ಯ ಸರ್ಕಾರ ಚಿಂತನೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಯನ್ನು ಶಾಶ್ವತವಾಗಿ ರದ್ದುಗೊಳಿಸಿ ಹಳೆಯ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಮುಡಾದಲ್ಲಿ ಸದಸ್ಯರಾಗಿರುವ ಬಹುತೇಕ ಜನಪ್ರತಿನಿಧಿಗಳು ಲ್ಯಾಂಡ್ ಡೆವಲಪರ್​ಗಳಾಗಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ಮರು ರಚನೆಗೆ ಸರ್ಕಾರದ ಹಂತದಲ್ಲಿ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಮಹದೇವಪ್ಪ, ಈ ಕುರಿತು ಚಿಂತನೆ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಸಹ ನಡೆಸಲಾಗಿದೆ. ಅವರೂ ಈ ಬಗ್ಗೆ ಒಲವು ತೋರಿದ್ದಾರೆ. ಮುಂದಿನ ಹಂತದಲ್ಲಿ ಕಾನೂನಿಗೆ ತಿದ್ದುಪಡಿ ತಂದು ಈ ಹಿಂದಿನಂತೆ ಮೂವರು ಸದಸ್ಯರು ಮಾತ್ರ ಇರುವ ವ್ಯವಸ್ಥೆ ಜಾರಿಗೆ ತರುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಮುಡಾದಲ್ಲಿ ನಡೆದಿರುವ ಹಗರಣಕ್ಕೂ ಸಿಎಂ ಪತ್ನಿ ಪಾರ್ವತಿ ಅವರಿಗೆ ಹಂಚಿಕೆಯಾಗಿರುವ ನಿವೇಶನಕ್ಕೂ ಸಂಬಂಧವಿಲ್ಲ. ಅವರಿಗೆೆ ಕಾನೂನು ಬದ್ಧವಾಗಿ ನಿವೇಶನ ಹಂಚಲಾಗಿದೆ ಎಂದು ಸ್ಪಷ್ಟಪಡಿಸಿದರು. ಪಾರ್ವತಿಗೆ ದೊರೆತಿರುವ ಜಾಗವು ಅನುಸೂಚಿತ ಜಾತಿ ಮತ್ತು ಅನು ಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (ಪಿಟಿಸಿಎಲ್) ವ್ಯಾಪ್ತಿಗೆ ಒಳಪಟ್ಟ ಜಾಗವಲ್ಲ. 1985ರಲ್ಲಿ ಸಾರ್ವಜನಿಕ ಹರಾಜಿನಲ್ಲಿ ದಲಿತ ಸಮುದಾಯದ ಜವರ ಎಂಬುವರು 3.16 ಎಕರೆ ಕೃಷಿ ಭೂಮಿಯನ್ನು ಖರೀದಿಸಿದರು. ಅದು ಸರ್ಕಾರ ನೀಡಿದ ಜಾಗವಲ್ಲ, ಹರಾಜಿನ ಮೂಲಕ ಖರೀದಿಸಿದ ಜಾಗವಾದ ಹಿನ್ನೆಲೆಯಲ್ಲಿ ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಜಾಗವನ್ನು ಪಾರ್ವತಿ ಸಹೋದರ ಮಲ್ಲಿಕಾರ್ಜುನ ಖರೀದಿಸಿ ಪಾರ್ವತಿಗೆ ದಾನವಾಗಿ ನೀಡಿದರು. ಇದು ಶೇ.100 ಕಾನೂನು ಬದ್ಧವಾಗಿ ದೊರೆತಿರುವ ಜಾಗ ಎಂದರು.

ಆಯುಕ್ತರ ಬದಲಿಸಲು ಪತ್ರ ಬರೆದಿದ್ದೆ

ನನ್ನ ಅವಧಿಯಲ್ಲೇ ಮುಡಾದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಆಯá-ಕ್ತರನ್ನು ಬದಲಾವಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದರು. ಜಾತಿಯ ಕಾರಣಕ್ಕೆ ಸರ್ಕಾರದ ಕೆಲ ಉನ್ನತಾಧಿಕಾರಿಗಳು ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಜತೆಗೆ ಆಯುಕ್ತರೂ ಕೋರ್ಟ್​ಗೆ ಹೋಗಿ ಅಧಿಕಾರ ಉಳಿಸಿಕೊಂಡಿದ್ದರು ಎಂದು ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ನಾನು ಉಸ್ತುವಾರಿ ಸಚಿವನಾಗಿದ್ದಾಗ ಈ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಯಲ್ಲಿ ಚರ್ಚೆ ನಡೆಸಬೇಕು. ಆದರೆ ಆಯುಕ್ತರು ಸಭೆ ಮಾಡದೆ ಸೈಟ್​ಗಳನ್ನು ನೀಡಿದ್ದಾರೆ. ಯಾವುದೇ ನಿಯಮವನ್ನು ಅಂದಿನ ಆಯುಕ್ತ ಫಾಲೋ ಮಾಡಲಿಲ್ಲ ಎಂದು ಗಂಭೀರ ಆರೋಪ ಮಾಡಿದರು. ನನ್ನ ಹೆಸರಿನಲ್ಲಿ ಅಥವಾ ಬೇನಾಮಿ ಹೆಸರಿನಲ್ಲಿ ಮುಡಾದ ಒಂದೇ ಒಂದು ನಿವೇಶನ ಇರುವುದು ಸಾಬೀತಾದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅನಗತ್ಯವಾಗಿ ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದರು.

ಚರ್ಚೆಯೇ ಆಗದೆ ಅನುಮೋದನೆ: ಮುಡಾದ ಪ್ರತಿ ಸಭೆಯಲ್ಲಿ ಸ್ಥಳೀಯ ಶಾಸಕರ ಫೈಲ್​ಗಳೇ ಇರುತ್ತಿದ್ದವು. ಶಾಸಕರ ಹೆಸರಿನ ಫೈಲ್​ಗಳು ಚರ್ಚೆಯೇ ಅಗದೆ ಅನá-ಮೋದನೆ ಆಗುತ್ತಿದ್ದವು. ಇಲ್ಲಿ ಸದಸ್ಯರಾಗಲು ಬೇರೆ ಜಿಲ್ಲೆಗೆ ಸೇರಿದ ವಿಧಾನ ಪರಿಷತ್ ಸದಸ್ಯರೂ ವಾಸ ಸ್ಥಳವನ್ನು ಮೈಸೂರಿಗೆ ಸ್ಥಳಾಂತರಗೊಳಿಸಿಕೊಂಡಿದ್ದಾರೆ ಎಂದು ದೂರಿದರು.

ಮುಡಾದಲ್ಲಿ ಆಡಳಿತ ಮಂಡಳಿ (ಬೋರ್ಡ್) ವ್ಯವಸ್ಥೆ ಬದಲಾಗಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿಯೂ ಅದರ ವ್ಯಾಪ್ತಿಗೆ ಬರುವ ಎಲ್ಲ ಜನಪ್ರತಿನಿಧಿಗಳನ್ನು ಸೇರಿಸಿಲ್ಲ. ಹಾಗೆಯೇ ಮುಡಾದಲ್ಲಿಯೂ ಕ್ರಮಕೈಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮುಡಾ ಹಗರಣ ಕುರಿತು ತನಿಖೆ ನಡೆಸಲು ಸಮಿತಿ ರಚನೆಯಾಗಿದ್ದು, ಸಮಗ್ರವಾಗಿ ತನಿಖೆ ನಡೆಸಲಾಗುವುದು. ತನಿಖಾ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ ಒತ್ತಾಯಿಸುತ್ತಿದೆ ಎಂದು ಇಲಿ ಹೋಯ್ತು, ಕೋತಿ ಹೋಯ್ತು ಅಂತ ಸಿಬಿಐ ತನಿಖೆಗೆ ವಹಿಸಲು ಸಾಧ್ಯವೇ?

| ಎಚ್.ಸಿ.ಮಹದೇವಪ್ಪ ಸಚಿವ