ಹಾಸನ: ನಾವು ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಐದು ಯೋಜನೆ ಮುಂದುವರಿಸುತ್ತೇವೆ. ಅರ್ಹರಿಗೆ ಬಿಪಿ ಎಲ್ ಕಾರ್ಡ್ ನೀಡುತ್ತೇವೆ. ಸಾರ್ವಜನಿಕ ಹಿತಾಸಕ್ತಿ ಮೇಲೆ ಸರ್ಕಾರ ನಡೆಸಲಾಗುವುದು. ವಾಲ್ಮೀಕಿ ನಿಗಮದಲ್ಲಿ ಮುಜುಗರ ಆಗಿಲ್ಲ ಬದಲಿಗೆ ತನಿಖೆಯಾಗುತ್ತಿದೆ. ಎಸ್ಐಟಿ ಜತೆ ಇಡಿ ಇದೆ. ವರದಿ ಬಂದ ಮೇಲೆ ನೋಡೋಣ ಎಂದು ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇಂದು ಹಾಸನದಲ್ಲಿ ಮಾತನಾಡಿದರು.
"ಬಿಜೆಪಿಯವರು ಭ್ರಮೆಯಲ್ಲಿದ್ದು, ಫಲಿತಾಂಶದಿಂದ ಗಾಬರಿಯಾಗಿದ್ದಾರೆ. ಈಗ ಸರ್ಕಾರ ಬೀಳಿಸಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವಿರೋಧ ಪಕ್ಷದ ನಾಯಕ ಸರ್ಕಾರ ಕಿತ್ತೆಸೆಯುತ್ತೇನೆ ಎನ್ನುವುದು ಅಪರಾಧ. ಮುಡಾ ಕಾಯ್ದೆಯಲ್ಲಿ ಬಿಜೆಪಿ ಸರ್ಕಾರದಲ್ಲಿಯೇ ಸಿದ್ದರಾಮಯ್ಯ ಪತ್ನಿಗೆ ಸೈಟ್ ಹಂಚಲಾಗಿದೆ. ಪತ್ನಿ ಅಣ್ಣ ನೀಡಿದ್ದ ಜಮೀನು ವಶಕ್ಕೆ ಪಡೆದು ಅದರ ಮೇಲೆ ಸೈಟ್ ನೀಡಿದೆ, ಅದರ ತನಿಖೆಯೂ ನಡೆಯುತ್ತಿದೆ" ಎಂದರು.