ನ್ಯೂಸ್

ಕಾಲ್ತುಳಿತ ಪ್ರಕರಣ; ರಣಹದ್ದುಗಳಂತೆ ಎರಗಿ ಬೀಳುವುದು ಬಿಜೆಪಿಯ ರಕ್ತದಲ್ಲಿಯೇ ಇದೆ: CM ಸಿದ್ರಾಮಯ್ಯ ಕಿಡಿ

ಹೆಣಗಳ ಮೇಲಿನ ರಾಜಕೀಯ ಬಿಜೆಪಿ ಪಾಲಿಗೆ ಹೊಸದೇನಲ್ಲ. ಅಪಘಾತ, ಹತ್ಯೆ, ದೌರ್ಜನ್ಯಗಳು ನಡೆದ ತಕ್ಷಣ ಸತ್ತ ಜೀವಗಳನ್ನು ಹುಡುಕಿಕೊಂಡು ಹೋಗುವ ರಣಹದ್ದುಗಳಂತೆ ಎರಗಿ ಬೀಳುವುದು ಬಿಜೆಪಿಯ ರಕ್ತದಲ್ಲಿಯೇ ಇದೆ. ತಮ್ಮ ಊಟದೆಲೆಯ ಮೇಲೆ ಆನೆ ಸತ್ತುಬಿದ್ದಿದ್ದರೂ ಎದುರಿಗಿದ್ದವರ ಎಲೆ ಮೇಲೆ ಸತ್ತು ಬಿದ್ದ ನೊಣದ ಕಡೆ ಬೊಟ್ಟುಮಾಡುವುದು ಬಿಜೆಪಿಯ ಹಳೆಯ ಚಾಳಿ ಎನ್ನುವುದನ್ನು ರಾಜ್ಯದ ಜನತೆ ಅರ್ಥಮಾಡಿಕೊಂಡಿದ್ದಾರೆ ಎಂದು CM ಸಿದ್ದರಾಮಯ್ಯ ಕಿಡ ಕಾರಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ರಾಜೀನಾಮೆ ಕೇಳುವ ಮೊದಲು ಇಂತಹದ್ದೇ ಅವಘಡಗಳು ನಡೆದಿದ್ದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ರಾಜ್ಯದ ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

BJP ದು ರಾಜಕೀಯ ದುರುದ್ದೇಶ

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿರುವುದು ಒಂದು ಅಪಘಾತ. ಒಂದು ಜವಾಬ್ದಾರಿಯುತ ಸರ್ಕಾರವಾಗಿ ಆ ಘಟನೆಯ ಹೊಣೆಯನ್ನು ನಾವು ಹೊತ್ತಿದ್ದೇವೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ, ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ವರ್ಗಾವಣೆ ಮಾಡಿದ್ದೇವೆ. ನನ್ನ ರಾಜಕೀಯ ಕಾರ್ಯದರ್ಶಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದೇನೆ. ಈ ಪ್ರಕರಣದ ಸಮಗ್ರ ತನಿಖೆಗೆ ನಿವೃತ್ತ ನ್ಯಾಯಾಧೀಶರಾದ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನೂ ರಚಿಸಿದ್ದೇವೆ. ಇಷ್ಟೆಲ್ಲ ಕ್ರಮಕೈಗೊಂಡ ನಂತರವೂ ರಾಜ್ಯದ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಹೊರತು ಜನರ ಬಗೆಗಿನ ಕಾಳಜಿಯಿಂದ ಅಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹರಿಹಾಯ್ದಿದ್ದಾರೆ.

ನರೇಂದ್ರ ಮೋದಿ ರಾಜೀನಾಮೆ ನೀಡಿಲ್ಲ

2002ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡದಲ್ಲಿ ಎಲ್ಲ ಧರ್ಮಗಳಿಗೆ ಸೇರಿದ್ದ ಅಂದಾಜು ಎರಡು ಸಾವಿರ ಅಮಾಯಕರು ಪ್ರಾಣ ಕಳೆದುಕೊಂಡರು. ಆ ಘಟನೆಯ ಹೊಣೆಹೊತ್ತು ರಾಜೀನಾಮೆ ನೀಡುವಂತೆ ಅವರದ್ದೇ ಪಕ್ಷದ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಸೂಚನೆ ನೀಡಿದರೂ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ರಾಜೀನಾಮೆ ನೀಡಿಲ್ಲ ಮಾತ್ರವಲ್ಲ, ಇಲ್ಲಿಯ ವರೆಗೆ ಕನಿಷ್ಠ ವಿಷಾದವನ್ನೂ ಸೂಚಿಸಿಲ್ಲ. ನಮ್ಮ ರಾಜೀನಾಮೆ ಕೇಳುವವರು ಮೊದಲು ಇದಕ್ಕೆ ಉತ್ತರಿಸಿ ಎಂದಿದ್ದಾರೆ.

ನಮ್ಮ ಸರ್ಕಾರ ರಾಜ್ಯದ ಏಳು ಕೋಟಿ ಜನರಿಗೆ ಉತ್ತರದಾಯಿಯಾಗಿದೆ. ಈ ಕಾರಣಕ್ಕಾಗಿ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಭ್ರಷ್ಟರಾಗಿದ್ದಾರೆಂದು ಮೇಲ್ನೋಟಕ್ಕೆ ಅನಿಸಿದವರ ವಿರುದ್ದ ಕ್ರಮಕೈಗೊಳ್ಳಲಾಗಿದೆ. ಉಳಿದಂತೆ ಇದರ ಬಗ್ಗೆ ಆಮೂಲಾಗ್ರವಾದ ಮತ್ತು ನಿಷ್ಪಕ್ಷಪಾತ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಗಿದೆ. ಆಯೋಗ ನೀಡುವ ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ದ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.