ನ್ಯೂಸ್

ಎಸ್​ಟಿ ಮೀಸಲು ನಿರ್ಧಾರ ಮುಂದಕ್ಕೆ; ವಿವಿಧ ಸಮುದಾಯಗಳ ಬೇಡಿಕೆ ಬಗ್ಗೆ ಹಂತಹಂತವಾಗಿ ಪರಿಶೀಲನೆ

Webdesk - Ravikanth

ಬೆಂಗಳೂರು: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಶೇ.7.5ಕ್ಕೆ ಹೆಚ್ಚಳ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಬುಧವಾರ ನಡೆದ ಸರ್ವಪಕ್ಷ ಸಭೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಅಪೂರ್ಣವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಮನೆ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಹಾಗೂ ಸಚಿವರು ಭಾಗವಹಿಸಿದ್ದರು. ಅನ್ಯಕಾರ್ಯ ನಿಮಿತ್ತ ಸಭೆಗೆ ಗೈರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.30 ಅಥವಾ 31ಕ್ಕೆ ಸಭೆ ನಡೆಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅಂದು ಮತ್ತೆ ಸಭೆ ಸೇರುವ ನಿರ್ಧಾರಕ್ಕೆ ಬರಲಾಯಿತು. ಅಷ್ಟರೊಳಗೆ ಕಾನೂನಾತ್ಮಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವರದಿ ನೀಡುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಸಭೆ ಸೂಚನೆ ನೀಡಿತು.

ಎಸ್​ಟಿ ಮೀಸಲಾತಿ ಹೆಚ್ಚಳ: ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇದ್ದು ನ್ಯಾ. ನಾಗಮೋಹನ್​ದಾಸ್ ಅವರ ಸಮಿತಿ ಸಲ್ಲಿಸಿರುವ ವರದಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವರದಿ, ಇಂದಿರಾ ಸಹಾನಿ ಪ್ರಕರಣದ ತೀರ್ಪು ಹಾಗೂ ನ್ಯಾ. ಸುಭಾಷ್ ಅಡಿ ಅವರ ಸಮಿತಿಯಿಂದ ಮಧ್ಯಂತರ ವರದಿಯನ್ನು ಪಡೆದು ಮೂರೂ ವರದಿಗಳನ್ನು ಅಧ್ಯಯನ ಮಾಡಿ ಕ್ರೋಡೀಕೃತ ವರದಿಯನ್ನು ನೀಡುವಂತೆ ಅಡ್ವೋಕೇಟ್ ಜನರಲ್ ಅವರಿಗೆ ತಿಳಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆಯ ನಂತರ ತಿಳಿಸಿದರು. ಎಜಿ ಅವರಿಂದ ವರದಿ ಪಡೆದು ಸರ್ವಪಕ್ಷ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಅಧಿವೇಶನದಲ್ಲಿ ಈ ವರ್ಗಕ್ಕೆ ನ್ಯಾಯ ನೀಡುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇತರರ ಬೇಡಿಕೆಗಳು: ಎಸ್​ಟಿ ಮೀಸಲಾತಿ ಹೆಚ್ಚಳದ ಬೇಡಿಕೆ ರೀತಿಯಲ್ಲಿಯೇ ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವಂತೆ, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ, ಇನ್ನೂ ಅನೇಕ ಸಮುದಾಯಗಳು ಬೇರೆ ಬೇರೆ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸುತ್ತಿವೆ. ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗದಂತೆ ನೋಡಿಕೊಂಡು ನಿರ್ಧಾರ ಮಾಡಬೇಕಾಗಿದೆ. ಮೊದಲಿಗೆ ನಾಗಮೋಹನ್​ದಾಸ್ ವರದಿ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಉಳಿದ ಸಮುದಾಯಗಳ ಬೇಡಿಕೆ ಬಗ್ಗೆ ಹಂತಹಂತವಾಗಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಮೀಸಲಾತಿ: ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ಏನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಲಹೆಯಂತೆ ಮಾ.30, 31ಕ್ಕೆ ಸಭೆ ನಡೆಸುತ್ತೇವೆ. ಮೀಸಲಾತಿ ನೀಡಲು ಪ್ರತ್ಯೇಕ ಆಯೋಗ ನೀಡಬೇಕೆ ಅಥವಾ ಹೇಗೆ ಮಾಡಬೇಕು ಎಂಬ ನಿರ್ಧಾರ ಮಾಡುತ್ತೇವೆ. ಒಬಿಸಿ ಮೀಸಲಾತಿ ಇಲ್ಲದೇ ಚುನಾವಣೆ ಮಾಡಲು ಸಾಧ್ಯವೇ ಇಲ್ಲ ಎಂದರು. ಸುಪ್ರೀಂಕೋರ್ಟ್ ಮುಂದೆ ಪುನರ್​ಪರಿಶೀಲನೆ ಅರ್ಜಿ ಹಾಕಬೇಕೆ ಎಂಬ ಬಗ್ಗೆ ಚರ್ಚೆಯ ನಂತರ ನಿರ್ಧಾರ ಮಾಡಲಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.