ನ್ಯೂಸ್

ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟಿಸಿ ಕುರುಡುಮಲೆ ವಿನಾಯಕನಿಗೆ ಹರಕೆ ತೀರಿಸಿದ ಶಿಕ್ಷಣ ಸಚಿವರು

ಕೋಲಾರ: ಬಹು ನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಮರುದಿನವೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಮುಳಬಾಗಿಲಿನ ಕುರುಡುಮಲೆ ಗಣಪನ ದರ್ಶನ ಪಡೆದರು.

ಮಹಾಮಾರಿ ಕರೊನಾ ಸೋಂಕಿನ ಭೀತಿ ನಡುವೆಯೂ ಹಠತೊಟ್ಟವರಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ್ದ ಶಿಕ್ಷಣ ಸಚಿವರು, ಸೋಮವಾರ ಮಧ್ಯಾಹ್ನ ಫಲಿತಾಂಶವನ್ನು ಖುದ್ದು ಅವರೇ ಪ್ರಕಟಿಸಿ ಸಮಾಧಾನದ ನಿಟ್ಟುಸಿರುಬಿಟ್ಟರು. ಅಂದು ರಾತ್ರಿಯೇ ಕುರುಡುಮಲೆ ವಿನಾಯಕನಿಗೆ ಹರಕೆ ತೀರಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿರ್ವಿಘ್ನವಾಗಿ ಪ್ರಕಟವಾದ ಬಳಿಕ ಇದೀಗ ನನ್ನ ಮನಸ್ಸು ನಿರಾಳವಾಯಿತು ಎಂದು ಹೇಳಿಕೊಂಡ ಸಚಿವ ಸುರೇಶ್ ಕುಮಾರ್, ಈ ಹಿನ್ನೆಲೆಯಲ್ಲಿ ಕುರುಡುಮಲೆ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಂದಿರುವುದಾಗಿ ತಿಳಿಸಿದರು.

ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾಡುವುದು ಬೇಡ, ಸದ್ಯಕ್ಕೆ ಎಕ್ಸಾಂ ಮುಂದೂಡಿ, ಪರೀಕ್ಷೆ ರದ್ದು ಮಾಡಿ ಎಂಬೆಲ್ಲ ಅಭಿಪ್ರಾಯ ಕೇಳಿಬಂದಿತ್ತು. ಅಂತಿಮವಾಗಿ ಪರೀಕ್ಷೆ ನಡೆಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಹಲವರಿಂದ ಭಾರೀ ಟೀಕೆ, ಆಕ್ಷೇಪಣೆಯೂ ವ್ಯಕ್ತವಾಯಿತು. ವಿರೋಧದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಪಾಲಿಗೆ ಇದೊಂದು ಮಹತ್ತರ ಸವಾಲಾಗಿತ್ತು. ಪರೀಕ್ಷೆ ನಡೆದು ಫಲಿತಾಂಶವೂ ನಿರ್ವಿಘ್ನವಾಗಿ ಪ್ರಕಟವಾದ ಹಿನ್ನೆಲೆಯಲ್ಲಿ ಸಚಿವರು ದೇವರಿಗೆ ಹರಕೆ ತೀರಿಸಿದ್ದಾರೆ. ಅಲ್ಲದೆ, ಇದೀಗ ಮನಸ್ಸು ನಿರಾಳವಾಯಿತು, ಕುರುಡುಮಲೆ ವಿನಾಯಕನ ಮಂದಿರಕ್ಕೆ ಹೋಗಿ ಭಗವಂತನಿಗೆ ಶರಣಾದೆ ಎಂದೂ ಇದೇ ವೇಳೆ ಹೇಳಿಕೊಂಡರು.