ನ್ಯೂಸ್

ಕರೊನಾ ಆತಂಕದ ಮಧ್ಯೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: ಕಣ್ಣೀರಿಟ್ಟ ವಿದ್ಯಾರ್ಥಿನಿ, ಪೋಷಕರ ವಾಗ್ವಾದ

ಬೆಂಗಳೂರು: ಕರೊನಾ ವೈರಸ್​ ಆತಂಕದ ನಡುವೆಯೂ ಸಕಲ ಸಿದ್ಧತೆಗಳೊಂದಿಗೆ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಆರಂಭವಾಗಿದೆ.

3,209 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪರೀಕ್ಷೆಗೆ 8,48,203 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ.

ವಿದ್ಯಾರ್ಥಿನಿಯ ಕಣ್ಣೀರು

ಭಯದಲ್ಲಿಯೇ ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿದ್ದು, ರಾಯಚೂರಿನ ಬಾಲಕರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯೊಬ್ಬಳು ಕರೊನಾ ಭಯದಿಂದ ಕಣ್ಣೀರಾಕಿದಳು. ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಹಾಗೂ ಪಾಲಕರು ಧೈರ್ಯ ತುಂಬಿದರು.

ಸಾಮಾಜಿಕ ಅಂತರ ಮರೆತ ವಿದ್ಯಾರ್ಥಿಗಳು

ಪರೀಕ್ಷೆ ಆರಂಭಕ್ಕೂ ಮುನ್ನ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಿ.ಎಚ್.ಪಾಟೀಲ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಸೇರುವ ಮೂಲಕ ಸಾಮಾಜಿಕ ಅಂತರ ಮರೆತರು. ಬಳಿಕ ಪರೀಕ್ಷಾ ಕೇಂದ್ರದ ಸಿಬ್ಬಂದಿ ಗಮನಿಸಿ ವಿದ್ಯಾರ್ಥಿಗಳನ್ನು ಎಚ್ಚರಿಸಿದರು.

ಪೊಲೀಸರು vs ಪಾಲಕರು

ಕಲಬುರಗಿಯ ಎನ್.ವಿ.ಕಾಲೇಜ್ ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿ ಪೊಲೀಸರು ಹಾಗೂ ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು. ಪರೀಕ್ಷಾ ಕೇಂದ್ರದ ಮುಂಭಾಗ ನೂರಾರು ಜನ ಪೋಷಕರು ಜಮಾವಣೆಗೊಂಡಿದ್ದ ಹಿನ್ನಲೆಯಲ್ಲಿ ಪೊಷಕರನ್ನು ಪರೀಕ್ಷಾ ಕೇಂದ್ರದಿಂದ ತೆರಳುವಂತೆ ಪೊಲೀಸರು ಸೂಚಿಸಿದಾಗ, ಪೋಷಕರು ತೆರಳದ ಹಿನ್ನಲೆಯಲ್ಲಿ ಅವರನ್ನು ಪೊಲೀಸರು ತಳ್ಳಿದರು. ಈ ವೇಳೆ ಪೊಲೀಸರು ಮತ್ತು ಪೋಷಕರ ನಡುವೆ ಮಾತಿನ‌ ಚಕಮಕಿ ನಡೆಯಿತು.

ಎಲ್ಲ ಗೊಂದಲಗಳು ಹಾಗೂ ಭೀತಿಯ ನಡುವೆಯೂ ಪರೀಕ್ಷೆ ಆರಂಭವಾಗಿದೆ. ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್​, ಮಾಸ್ಕ್​ ಹಾಗೂ ಥರ್ಮಲ್​ ಸ್ಕ್ರೀನಿಂಗ್​ ಎಲ್ಲವನ್ನು ನಡೆಸಲಾಗಿದ್ದು, ಸುರಕ್ಷಿತ ಕ್ರಮಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳ ಜವಾಬ್ದಾರಿ ಏನು?

# ಪ್ರವೇಶ ಪತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು =ಒಂದೂವರೆ ಗಂಟೆ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕು

# ಪ್ರತಿಯೊಬ್ಬರು ಮಾಸ್ಕ್ ಧರಿಸಿ ಬರಬೇಕು

# ಮಾಸ್ಕ್ ಇಲ್ಲದಿದ್ದರೆ ಭಯ ಬೇಡ. ಕೇಂದ್ರದಲ್ಲೇ ಮತ್ತೊಂದು ಮಾಸ್ಕ್ ದೊರೆಯಲಿದೆ

# ವಿದ್ಯಾರ್ಥಿಗಳು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು

# ಒಂದು ಮೀಟರ್ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬರಬೇಕು =ತಪಾಸಣೆ ನಂತರವೇ ಕೇಂದ್ರದೊಳಗೆ ಪ್ರವೇಶ

# ಕೆಮ್ಮುವಾಗ, ಸೀನುವಾಗ, ಕರವಸ್ತ್ರ ಉಪಯೋಗಿಸಬೇಕು =ಬಾಗಿಲು, ಕಿಟಕಿಯನ್ನು ಅನವಶ್ಯವಕವಾಗಿ ಮುಟ್ಟಬಾರದು

# ವಿದ್ಯಾರ್ಥಿಗಳು ತಮ್ಮದೇ ಆದ ಬಾಟಲಿನಲ್ಲಿ ನೀರು ತರಬೇಕು

# ಪ್ರತಿಯೊಬ್ಬರು ದೈಹಿಕ ಅಂತರ ಕಾಯ್ದುಕೊಳ್ಳಬೇಕು

# ವಿದ್ಯಾರ್ಥಿಗಳು ಬೇಕಾ ಬಿಟ್ಟಿ ಉಗಳುವಂತಿಲ್ಲ

ಸುರಕ್ಷತಾ ಕ್ರಮಗಳೇನು?

# 7115 ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ

# 236 ಹೆಲ್ಪ್ ಡೆಸ್ಕ್

# 6418 ಸ್ವಯಂ ಸೇವಕರಿಂದ ಸೇವೆ

# ವಿದ್ಯಾರ್ಥಿ ಹೊರತಾಗಿ ಪರೀಕ್ಷಾ ಕೇಂದ್ರಕ್ಕೆ ಬೇರೆ ಅವರ ಪ್ರವೇಶ ನಿಷೇಧ

# ಕೇಂದ್ರದ ಸುತ್ತ 200 ಮೀಟರ್ ನಿಷೇದಾಜ್ಞೆ ಜಾರಿ

# ಜನದಟ್ಟಣೆ ಆಗದಂತೆ ತಡೆಗೆಟ್ಟಲು ಬ್ಯಾರಿಕೇಡ್​ಗಳ ನಿರ್ಮಾಣ

# 12,674 ವಲಸೆ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ