ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಎಲ್ಲ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ತಿಳಿಸಿದ್ದು, ಇದುವರೆಗೂ ವಿದ್ಯಾರ್ಥಿಗಳಲ್ಲಿ ಇದ್ದ ಗೊಂದಕ್ಕೆ ಕೊನೆಗೂ ಸ್ಪಷ್ಟನೆ ಸಿಕ್ಕಿದೆ.
ಪರೀಕ್ಷೆಯನ್ನು ಮುಂದೂಡುವಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಕರು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟ ನಿಲುವು ತೆಗದುಕೊಂಡಿರಲಿಲ್ಲ. ಇದೀಗ ಸ್ವತಃ ಮುಖ್ಯಮಂತ್ರಿಗಳೇ ಘೋಷಣೆ ಮಾಡಿರುವುದರಿಂದ ಪಾಲಕರು ನಿಟ್ಟುಸಿರುವ ಬಿಡುವಂತಾಗಿದೆ. 27.03.2020ರಿಂದ ಪ್ರಾರಂಭವಾಗಬೇಕಿದ್ದ ಪರೀಕ್ಷೆಯನ್ನು ಸದ್ಯ ಮುಂದೂಡಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಪರೀಕ್ಷಾ ದಿನಾಂಕಗಳು ಘೋಷಣೆಯಾಗಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ನು 15 ದಿನ ಯಾರೂ ಕೂಡ ಹಳ್ಳಿಗೆ ಹೋಗಬೇಡಿ, ಈಗಾಗಲೇ ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಹಳ್ಳಿಗಳಿಗೆ ಹೋಗಬೇಡಿ, ಕೈ ಮುಗಿಯುತ್ತೇನೆ ಎಂದು ಮನವಿ ಮಾಡಿದರು. ರಾಜ್ಯದ ಗಡಿಭಾಗವನ್ನು ಸಂಪೂರ್ಣ ಮುಚ್ಚಲಾಗಿದೆ. ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಮಾಡಲಾಗಿದೆ. ಬಾಲಬ್ರೂಯಿ ಅತಿಥಿ ಗೃಹವನ್ನು ಕೊರೊನಾ ತಡೆಯ ವಾರ್ ರೂಂ ಆಗಿ ತೆರೆಯಲಾಗಿದೆ ಎಂದು ತಿಳಿಸಿದರು.
ಜನತೆ ಗಾಬರಿಯಾಗುವ ಅಗತ್ಯವಿಲ್ಲ. ಜೀವನಾವಶ್ಯಕ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು. ವಿಕ್ಟೊರಿಯಾ ಆಸ್ಪತ್ರೆಯಲ್ಲಿನ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಆಸ್ಪತ್ರೆಯಲ್ಲಿ 1700 ಹಾಸಿಗೆಯ ವಿಶೇಷ ಕರೊನಾ ಚಿಕಿತ್ಸಾ ಸಮುಚ್ಚಯವಾಗಿ ಮೀಸಲಿಡಲಾಗುವುದು ಎಂದರು.
ಎಲ್ಲಾ ಸ್ಥಳೀಯ ಸಂಸ್ಥೆಗಳು ಮುಂದೂಡಲಾಗಿದೆ. ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಪರೀಕ್ಷೆಗೆ ಪರವಾನಗಿ ನೀಡಲು ತೀರ್ಮಾನಿಸಲಾಗಿದೆ. ಟಾಸ್ಕ್ ಫೋರ್ಸ್ ಮಾದರಿಯಂತೆ ಜಿಲ್ಲಾ ಮಟ್ಟದಲ್ಲಿ ನುರಿತ ವೈದ್ಯರ ತಂಡದಿಂದ ವೈದ್ಯಕೀಯ ಕಾರ್ಯ ನಡೆಯಲಿದೆ. ಮನೆಯಲ್ಲಿ ಆಹಾರ ಸ್ಟಾಕ್ ಮಾಡಿಕೊಳ್ಳುವ ಅಗತ್ಯತೆ ಇಲ್ಲ. ಆಹಾರ ಸಮಸ್ಯೆ ಆಗದ ರೀತಿ ಸರ್ಕಾರ ಕ್ರಮ ವಹಿಸಿದೆ. ಎರಡು ತಿಂಗಳ ರೇಷನ್ ಅನ್ನು ಒಟ್ಟಿಗೆ ಕೊಡಲು ಸರ್ಕಾರ ತೀರ್ಮಾನ ಮಾಡಿದೆ ಎಂದರು.