ನ್ಯೂಸ್

ಪ್ರಮೋದ್​​ ಮುತಾಲಿಕ್​ಗೆ ಜೀವ ಬೆದರಿಕೆ ಕರೆ; ಇದಕ್ಕೆಲ್ಲ ನಾನು ಹೆದರೋಲ್ಲ ಎಂದ ಶ್ರೀರಾಮ ಸೇನೆ ಅಧ್ಯಕ್ಷ

ಬಾಗಲಕೋಟೆ: ಕಳೆದೆರಡು ದಿನಗಳಿಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಇದರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಎರಡು ದಿನಗಳಲ್ಲಿ 5 ಕರೆಗಳು ಬಂದಿವೆ. ಕರೆ ಸ್ವೀಕರಿಸಿದ ಮುತಾಲಿಕ್​ಗೆ ಕರೆ ಮಾಡಿದವರು ಧಮ್ಕಿ ನೀಡಿದ್ದಲ್ಲದೇ, ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಾಗಲಕೋಟೆಯ ಬನಹಟ್ಟಿಯಲ್ಲಿ ಹೇಳಿಕೆ ನೀಡಿರುವ ಪ್ರಮೋದ್​ ಮುತಾಲಿಕ್​ 'ಕೊಲೆ ಬೆದರಿಕೆ ಹಾಕುವವರಿಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ .ನಿಮ್ಮ ಬೊಗಳುವಿಕೆಯನ್ನು ನಿಲ್ಲಿಸಿ. ನಾವು ಸಂವಿಧಾನ, ಕಾನೂನು, ಪ್ರಜಾಪ್ರಭುತ್ವದ ಆಧಾರದ ಮೇಲೆ ಸಂಘಟನೆ ಮಾಡ್ತಿದ್ದೇವೆ. ನಾನು ಸಾಯೋವರೆಗೂ ಹಿಂದೂತ್ವ ಹಾಗೂ ದೇಶಕ್ಕಾಗಿ ಕೆಲಸವನ್ನು ಮಾಡುತ್ತೇನೆ. ನಿಮ್ಮ ಕೊಲೆ ಬೆದರಿಕೆಗಳಿಗೆ ನಾನು ಆತಂಕಗೊಳ್ಳುವುದಿಲ್ಲ ಎಂದು ಬೆದರಿಕೆ ಕರೆ ಮಾಡಿದವರಿಗೆ ಮುತಾಲಿಕ್ ನೇರವಾಗಿ ಸವಾಲ್​ ಹಾಕಿದ್ದಾರೆ.

ಈ ಬೆದರಿಕೆಯ ಕುರಿತು ನಾನು ಈಗಾಗಲೇ ದೂರು ನೀಡಿದ್ದೇನೆ. ಕರೆ ಮಾಡಿದ್ದು ಯಾರು ಎಂಬುದು ನನಗೆ ಗೊತ್ತಿಲ್ಲ. ಫೋನ್​​ ನಂಬರನ್ನು ಪೊಲೀಸರಿಗೆ ಕೊಟ್ಟಿದ್ದೇನೆ. ಮುಂದಿನ ಕೆಲಸವೇನಿದ್ದರೂ ಪೊಲೀಸರದ್ದು. ಫೋನ್​ ಮಾಡಿದ್ದು ಯಾರು? ಏನು ? ಎಂಬುದನ್ನು ಅವರೇ ಶೋಧಿಸಬೇಕು ಎಂದು ಹೇಳಿದ್ದಾರೆ.

ಈಗಾಗಲೇ 2023 ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಮುತಾಲಿಕ್​ ತಮ್ಮ ಆಯ್ಕೆಯ ಕ್ಷೇತ್ರದ ಬಗ್ಗೆ ಡಿಸೆಂಬರ್​​ ಮೊದಲ ವಾರದಲ್ಲಿ ತಿಳಿಸಲಿದ್ದಾರೆ ಎನ್ನಲಾಗಿದೆ.