ನ್ಯೂಸ್

ಎರಡು ಭರ್ಜರಿ ಹಾಡು, ದುಪ್ಪಟ್ಟು ಬೇಡಿಕೆ! 'ಕಿಸ್ಸಿಕ್'​ನಿಂದ 'ಕಿಸ್'​​ ಬೆಡಗಿಗೆ ಒಲಿಯಿತು ಅದೃಷ್ಟ | Tollywood

ಆಂಧ್ರಪ್ರದೇಶ: 'ಕಿಸ್' ಚಿತ್ರದ​ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ಯುವನಟಿ ಶ್ರೀಲೀಲಾ, ಭರಾಟೆ ಮತ್ತು ಬೈಟು ಲವ್​ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ನಂತರದಲ್ಲಿ ಅಬ್ಬರಿಸಿದ್ದು, ಮಿಂಚಿದ್ದು ಟಾಲಿವುಡ್ (Tollywood)​ ಅಂಗಳದಲ್ಲಿ. ಮಾಸ್​ ರಾಜ ನಟ ರವಿತೇಜ ಅವರೊಂದಿಗೆ ಧಮಾಕಾ ಮಾಡಿದ ಶ್ರೀಲೀಲಾ, ಈ ಚಿತ್ರದಲ್ಲಿ ನಟಿಸಿದ ರೀತಿ, ಕುಣಿತಕ್ಕೆ ಪ್ರೇಕ್ಷಕರು ಮಾರುಹೋದರು. ಈ ಸಿನಿಮಾದ ನಂತರ ಶ್ರೀಲೀಲಾ ಪಾಲಿಗೆ ಒಲಿದ ಅದೃಷ್ಟವೇ 'ಗುಂಟುರು ಕಾರಂ'.

ಸರಣಿ ಸೋಲು

'ಧಮಾಕಾ' ಚಿತ್ರದ ಬಳಿಕ ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ನಟನೆಯ 'ಗುಂಟೂರು ಕಾರಂ' ಚಿತ್ರದ ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದ ಶ್ರೀಲೀಲಾ, ತಮ್ಮ ಎನರ್ಜಿಗೆ ಸ್ಟಾರ್​ ನಟರು ಹೊಂದಿಕೊಳ್ಳಲು ಕಷ್ಟವಾಗುವಂತೆ ಕುಣಿದು ಕುಪ್ಪಳಿಸಿದ್ದರು. ಇದೇ ವಿಷಯಕ್ಕೋ ಏನೋ ನಟಿಗೆ ಅವಕಾಶಗಳು ಕೊಂಚ ಕಡಿಮೆಯಾಗುವುದರ ಜತೆಗೆ ಸರಣಿ ಸೋಲುಗಳು ಶುರುವಾಯಿತು. ಸ್ಟಾರ್​ ನಟರೊಂದಿಗೆ ಅಭಿನಯದ ಸಿನಿಮಾಗಳು ಒಂದರಂತೆ ಒಂದು ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿತು. ಆದರೆ, ಇದೀಗ ಮತ್ತೆ ಶ್ರೀಲೀಲಾ ಸದ್ದು ಜೋರಾಗಿ ಕೇಳಿಸಿದ್ದು, 'ಪುಷ್ಪ 2' ಚಿತ್ರದ 'ಕಿಸ್ಸಿಕ್'​ ವಿಶೇಷ ಹಾಡಿನಲ್ಲಿ ಅಲ್ಲು ಅರ್ಜುನ್​ ಜತೆಗೆ ಫೈರ್​ ಹಚ್ಚಿದ ಬೆನ್ನಲ್ಲೇ ಎರಡು ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಶ್ರೀಲೀಲಾ ಹವಾ ಜೋರು

ಈಗಾಗಲೇ ಸಿತಾರ ಬ್ಯಾನರ್‌ನಲ್ಲಿ ಸಿದ್ದು ಜೊನ್ನಲಗಡ್ಡ ಮತ್ತು ರವಿತೇಜ ಜತೆ ಎರಡು ಚಿತ್ರಗಳಿಗೆ ಸಹಿ ಮಾಡಿರುವ ಶ್ರೀಲೀಲಾ, ಅದೇ ಸಿತಾರಾ ಬ್ಯಾನರ್‌ನಡಿ ನಿರ್ಮಾಣವಾಗಲಿರುವ ಮತ್ತೊಂದು ಸಿನಿಮಾದಲ್ಲಿ ಅಖಿಲ್ ಅಕ್ಕಿನೇನಿ ಜತೆ ನಟಿಸಲು ಸಜ್ಜಾಗಿದ್ದಾರೆ. 'ವಿನರೋ ಭಾಗ್ಯಂ ವಿಷ್ಣುಕಥಾ' ಚಿತ್ರದ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶಿಸಲಿದ್ದು, ಅನ್ನಪೂರ್ಣ ಸ್ಟುಡಿಯೋಸ್ ಸಿತಾರಾ ಜತೆಗೂಡಿ ಈ ಚಿತ್ರವನ್ನು ನಿರ್ಮಿಸಲಿದೆ. ಸದ್ಯ 'ಕಿಸ್ಸಿಕ್' ಹಾಡಿನ ಅಬ್ಬರದ ಬೆನ್ನಲ್ಲೇ ಮತ್ತೆ ಟಾಲಿವುಡ್​ನಲ್ಲಿ ಶ್ರೀಲೀಲಾ ಹವಾ ಜೋರಾಗಿದೆ. ಇದರ ಜತೆಗೆ ಸ್ಟಾರ್​ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಹ ಹೆಚ್ಚಿವೆ,(ಏಜೆನ್ಸೀಸ್).