ನ್ಯೂಸ್

ಮುಂದೆ ಹೀಗೆ ಮಾತಾಡಿದ್ರೆ ಬೇರೆ ರೀತಿಯಲ್ಲೇ... ಸಂಸದ ಸುಧಾಕರ್​​ ವಿರುದ್ಧ ಗುಡುಗಿದ ಶಾಸಕ SR Vishwanath

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಾಕೋ ಎಲ್ಲವೂ ಸರಿ ಇಲ್ಲವೆಂಬಂತೆ ಕಾಣುತ್ತಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ. ಬಿಜಯೇಂದ್ರರ ವಿರುದ್ಧ ಅಸಮಾಧಾನಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬಸನ್​ಗೌಡ ಪಾಟೀಲ್ ಯತ್ನಾಳ್​, ರಮೇಶ್​ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸಾಲಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ. ಸುಧಾಕರ್ (DR K Sudhakar) ಸೇರ್ಪಡೆಯಾಗಿದ್ದು, ಇವರ ವಿರುದ್ಧ ಯಲಹಂಕ ಶಾಸಕ ಎಸ್. ಆರ್​. ವಿಶ್ವನಾಥ್ (SR Vishwanath) ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಎಸ್​. ಆರ್. ವಿಶ್ವನಾಥ್​ (SR Vishwanath), ಸಂಸದ ಡಾ. ಸುಧಾಕರ್ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಬಗ್ಗೆ ಬಹಳ ಕೇವಲವಾಗಿ ಮಾತಾಡಿದ್ದಾರೆ. ಅವರು ಮಾತಾಡಿರುವುದು ನಮಗೆ ಹಿಡಿಸಿಲ್ಲ. ಏನೇ ಇದ್ದರೂ ರಾಜ್ಯಾಧ್ಯಕ್ಷರ ಜೊತೆ ಮಾತಾಡಬಹುದಿತ್ತು. ಪರೋಕ್ಷವಾಗಿ ನನ್ನ ಕ್ಷೇತ್ರದ ಬಗ್ಗೆಯೂ ಮಾತಾಡಿದ್ದಾರೆ. ನಾನೇನು ದಡ್ಡ ಅಲ್ಲ. ಸುಧಾಕರ್ ನನ್ನಿಂದಲೇ ಸರ್ಕಾರ ರಚನೆ ಆಯಿತು ಎಂದು ಹೇಳಿದ್ದಾರೆ. 17 ಶಾಸಕರು ಬಂದಾಗ ಕೊನೆಯದಾಗಿ ಮೆಜಾರಿಟಿ ಆದ ಬಳಿಕ ಬಂದವರು ಸುಧಾಕರ್ ಎಂದು ತಿರುಗೇಟು ನೀಡಿದ್ದಾರೆ.

40 ವರ್ಷದಿಂದ ನಾವು ರಾಜಕೀಯದಲ್ಲಿ ಇದ್ರೂ ಮಂತ್ರಿ ಸ್ಥಾನ ಕೇಳಲಿಲ್ಲ. ಏನೇ‌ ಇದ್ರೂ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತಾಡಿ. ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಒಂದು ಸ್ಥಾನ‌ಗೆದ್ದು ತೋರಿಸಿ ಎಂದಿದ್ದೀರಿ. ಮಿನಿಸ್ಟರ್ ಆಗಿದ್ದವರು ನೀವು, ನೀವೇ ಸೋತಿದ್ದೀರಿ. ಅವಕಾಶ ಸಿಕ್ಕರೆ ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಹೇಗೆ ಸಂಘಟನೆ ಮಾಡುತ್ತೇನೆ ಎಂದು ನಾನು ತೋರಿಸುತ್ತೇನೆ. ನಾನು ಸ್ನೇಹಕ್ಕೂ ಸಿದ್ದ,‌ ಸಮರಕ್ಕೂ ಬದ್ದ. ನನ್ನ ಬಗ್ಗೆ ‌ನಿನಗಿನ್ನೂ ಗೊತ್ತಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ನನಗೂ ಸಣ್ಣ ಪುಟ್ಟ ಅಸಮಾಧಾನ‌ ಇದೆ ಎಂದ ವಿಶ್ವನಾಥ್, ನಾನು ಯಾವತ್ತೂ ‌ಬಹಿರಂಗ ಹೇಳಿಕೆ ನೀಡಿಲ್ಲ. ಲೋಕಸಭಾ ಚುನಾವಣೆ ಸ್ಪರ್ಧೆಗೆ‌ ಕೊನೆಯಲ್ಲಿ ಬಂದ್ರಿ. ಆಗ ಲೋಕಸಭಾ ಟಿಕೆಟ್​ ಸಿಗಲ್ಲ‌ ಅಂತಾ ಏನೆಲ್ಲಾ ಹೇಳಿದ್ರಿ ಬಿಜೆಪಿಯಲ್ಲಿ‌ ಟಿಕೆಟ್ ಸಿಗಲ್ಲ ಅಂದಾಗ ‌ಕಾಂಗ್ರೆಸ್‌ನವರ‌ ಜೊತೆ ಮಾತಾಡಿರಲಿಲ್ವಾ ನಾನು ಬೇಕಾದ್ರೆ ಆಣೆ ಪ್ರಮಾಣ ಮಾಡ್ತೇನೆ. ಬಿಜೆಪಿಯಲ್ಲಿ ಒಂದು ಶಾಪವಿದೆ. ‌ಒಮ್ಮೆ ಬಿಜೆಪಿಗೆ ಬಂದು ಬಿಟ್ಟುಹೋದರೆ‌ ಸಕ್ಸಸ್ ಆದವರು 1% ಅಷ್ಟೇ. ಈ‌ ಪಕ್ಷ ಬಿಟ್ಟು ಉದ್ದಾರ‌ ಆದೋರು ಕಡಿಮೆ. ಮುಂದೆ ಹೀಗೆ ಮಾತಾಡಿದ್ರೆ ನಾನು ಬೇರೆ ರೀತಿಯಲ್ಲೇ ಮಾತಾಡಬೇಕಾಗುತ್ತದೆ ಎಂದು ಸಂಸದ ಸುಧಾಕರ್​ಗೆ ಯಲಹಂಕ ಶಾಸಕ ಎಸ್​.ಆರ್. ವಿಶ್ವನಾಥ್ (SR Vishwanath) ಎಚ್ಚರಿಕೆ ನೀಡಿದ್ದಾರೆ.