ಚಂಡೀಗಢ: ದೆಹಲಿ ಮತ್ತು ಹರಿಯಾಣ ನಡುವಿನ ಟಿಕ್ರಿ ಗಡಿಯಲ್ಲಿ ವೇಗವಾಗಿ ಹೋಗುತ್ತಿದ್ದ ಟ್ರಕ್ ಒಂದು ಮೇಲೆ ಹರಿದು ಮೂವರು ರೈತಮಹಿಳೆಯರು ಸಾವಪ್ಪಿದ್ದಾರೆ. ಇಂದು ಬೆಳಿಗ್ಗೆ, ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ತಮ್ಮ ಹಳ್ಳಿಗೆ ವಾಪಸಾಗಲು ಆಟೋ ರಿಕ್ಷಾಗೆ ಕಾಯುತ್ತಿದ್ದಾಗ, ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ 6 ಗಂಟೆ ವೇಳೆಗೆ ಹರಿಯಾಣದ ಜಝ್ಝರ್ ಜಿಲ್ಲೆಯ ಬಹದೂರ್ಗಡದ ಬಳಿ ವೇಗವಾಗಿ ಚಲಿಸುತ್ತಿದ್ದ ಟ್ರಕ್, ರಸ್ತೆ ಡಿವೈಡರ್ ಮೇಲೆ ಹರಿಹಾಯ್ದಿತು. ಆ ಡಿವೈಡರ್ ಮೇಲೆ ಆಟೋರಿಕ್ಷಾಗಾಗಿ ಐವರು ಮಹಿಳೆಯರು ಕಾದು ಕುಳಿತಿದ್ದರು. ಅವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮೂರನೆಯವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಇನ್ನಿಬ್ಬರು ಮಹಿಳೆಯರಿಗೆ ಗಾಯಗಳುಂಟಾದವು ಎನ್ನಲಾಗಿದೆ.
ಟ್ರಕ್ ಚಾಲಕ ಅಪಘಾತ ಸ್ಥಳದಲ್ಲಿ ವಾಹನ ಬಿಟ್ಟು ಓಡಿಹೋಗಲು ಪ್ರಯತ್ನಿಸಿದ. ಆದರೆ ಸ್ಥಳೀಯ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಚಾಲಕನು ನಿದ್ದೆ ಹತ್ತಿ ವಾಹನವನ್ನು ಡಿವೈಡರ್ ಮೇಲಕ್ಕೆ ಹೊರಳಿಸಿದ್ದಾನೆಂದು ಅನುಮಾನಿಸಲಾಗಿದೆ.
ಮೃತರನ್ನು ಪಂಜಾಬ್ನ ಮಾನ್ಸಾ ಜಿಲ್ಲೆಯ ಖೀವ ದಿಯಲು ವಾಲ ಎಂಬ ಗ್ರಾಮಕ್ಕೆ ಸೇರಿದ್ದ ಅಮರ್ಜೀತ್ ಕೌರ್, ಗುರ್ಮೇಲ್ ಕೌರ್ ಮತ್ತು ಸುಖವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗುರ್ಮೇಲ್ ಕೌರ್ ಮತ್ತು ಹರಮೀತ್ ಕೌರ್ ಎಂಬ ಇಬ್ಬರು ಮಹಿಳೆಯರೂ ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)