Recipe: ಶ್ರಾವಣ ಮಾಸ ಹಿಂದುಗಳ ಪವಿತ್ರ ತಿಂಗಳು. ಈ ಮಾಸದಲ್ಲಿ ಶಿವನ ಭಕ್ತರು ಹಲವಾರು ಪೂಜೆಯಲ್ಲಿ ಮಿಂದೇಳುತ್ತಾರೆ. ಶ್ರಾವಣದ ಸೋಮವಾರದಂದು ಅನೇಕರು ಉಪವಾಸ ಇದ್ದು, ಶಿವನನ್ನು ಪೂಜಿಸುತ್ತಾರೆ. ಭಕ್ತಿಗೆ ಸಮರ್ಪಿತವಾದ ಈ ಮಾಸದಲ್ಲಿ ಅನೇಕರು ತಮ್ಮ ವ್ರತದ ಭಾಗವಾಗಿ ಮಾಂಸಾಹಾರವನ್ನು ಕೂಡ ತ್ಯಜಿಸುತ್ತಾರೆ.
ಹಣ್ಣುಗಳು, ಲಘು ಉಪಹಾರ ಸಾಮಾನ್ಯವಾಗಿದ್ದರೂ, ಕೆಲವೊಮ್ಮೆ ಹೊಟ್ಟೆ ತುಂಬುವಂತಹ ರುಚಿಯಾದ ಅಡುಗೆಯನ್ನು ಕೆಲವರು ಬಯಸುತ್ತಾರೆ. ಅಂತಹ ಆಹಾರ ಪ್ರಿಯರಿಗಾಗಿಯೇ ನಾವಿಂದು ವಿಶೇಷ ಖಾದ್ಯವೊಂದನ್ನು ಪರಿಚಯಿಸುತ್ತೇವೆ. ರುಚಿಕರ ಹಾಗೂ ಉಪವಾಸಕ್ಕೆ ತೃಪ್ತಿದಾಯಕವಾದಂತಹ ಸಾಬೂದಾನಿನ ಪರೋಠವನ್ನು ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
* 1 ಕಪ್ ಸಾಬುದಾನ್
* 2 ಬೇಯಿಸಿದ ಆಲುಗಡ್ಡೆ
* ರುಚಿಗೆ ತಕ್ಕಷ್ಟು ಕಲ್ಲು ಉಪ್ಪು
* 1-2 ಹಸಿರು ಮೆಣಸಿನಕಾಯಿ
* ಕೊತ್ತುಂಬರಿ ಸೊಪ್ಪು
* 1/2 ಚಮಚ ಜೀರಿಗೆ
* 1 ಚಮಚ ನಿಂಬೆರಸ
* 1/4 ಚಮಚ ಕರಿಮೆಣಸು ಪುಡಿ
* ಸ್ವಲ್ಪ ಎಣ್ಣೆ
ಮೊದಲು ಸಾಬೂದಾನನ್ನು 2 ರಿಂದ 3 ಬಾರಿ ಚೆನ್ನಾಗಿ ತೊಳೆಯಬೇಕು. ಅದನ್ನು 4-5 ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಬೇಕು. ನಂತರ ಒಂದು ದೊಡ್ಡ ಬಟ್ಟಲಿನಲ್ಲಿ ಸಾಬೂದಾನನ್ನು ಸೇರಿಸಿ, ನೆನೆಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಬೇಕು. ಅದಕ್ಕೆ ಮೆಣಸಿನಕಾಯಿ, ಕೊತ್ತುಂಬರಿ, ಜೀರಿಗೆ, ಕರಿಮೆಣಸು, ಕಲ್ಲು ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಬೇಕು. ಆನಂತರ ಕೈಗೆ ಎಣ್ಣೆ ಹಚ್ಚಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಅದನ್ನು ಕೈಯಿಂದ ತಟ್ಟಬೇಕು. ನಂತರ ಒಂದು ತವವನ್ನು ಗ್ಯಾಸ್ ಮೇಲೆ ಇಟ್ಟು ಆ ಪರೋಠವನ್ನು ಅದರ ಮೇಲೆ ಹಾಕಿ ಎರಡೂ ಬದಿ ಬೇಯಿಸಿ ಸ್ವಲ್ಪ- ತಣ್ಣಗಾದ ನಂತರ ಸವಿಯಿರಿ.