ನ್ಯೂಸ್

ಸಣ್ಣ ನೀರಾವರಿ ಕ್ಷೇತ್ರಕ್ಕೆ ದೊಡ್ಡ ಆಯಾಮ; ಇಲಾಖೆ ಪ್ರಗತಿಗೆ ಸಚಿವರ ನೀಲಿನಕ್ಷೆ

ಬೆಂಗಳೂರು: ಹೆಸರಿಗೆ ಮಾತ್ರ ‘ಸಣ್ಣ ನೀರಾವರಿ’ ಪರಿಣಾಮ ಹಾಗೂ ಫಲಿತಾಂಶ ಅಗಾಧವಾಗಿದೆ. ಆರ್ಥಿಕ ಇತಿಮಿತಿಯೊಳಗೆ ಲಭ್ಯ ಅವಕಾಶಗಳನ್ನು ರೈತ ಹಿತಕ್ಕೆ ಪೂರಕವಾಗಿ ಬಳಸಿಕೊಂಡು, ಅಂತರ್ಜಲ ವೃದ್ಧಿಗೆ ಹಲವು ಉಪಕ್ರಮಗಳನ್ನು ಕೈಗೊಳ್ಳುವ ದೃಢ ಸಂಕಲ್ಪ ಮಾಡಿರುವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

‘ವಿಜಯವಾಣಿ’ಯೊಂದಿಗಿನ ಸಂವಾದದಲ್ಲಿ ಎರಡೂ ಇಲಾಖೆಗಳ ಭವಿಷ್ಯದ ನಡೆಯ ನೀಲಿನಕ್ಷೆ ಬಿಡಿಸಿಟ್ಟ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ, ಹಲವು ಸಚಿವರ ಸಹಕಾರ, ಸಮನ್ವಯ ಭರವಸೆಯೊಂದಿಗೆ ನನ್ನದೇ ಆದ ಚಿಂತನೆ, ಕ್ಷೇತ್ರ ಕಾರ್ಯದ ಹಿನ್ನೆಲೆ ಹಲವು ಕ್ರಮಗಳಿಗೆ ಕೈ ಹಾಕಿರುವೆ. ಸಣ್ಣ ನೀರಾವರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಬೇಡಿಕೆಯೂ ಹೆಚ್ಚಿದೆ. ಅಂತರ್ಜಲದ ಮೇಲೆ ಅವಲಂಬನೆ ವಿಪರೀತವಾಗಿ ಅನೇಕ ಸವಾಲುಗಳನ್ನು ತಂದೊಡ್ಡಿದೆ ಎಂಬುದನ್ನು ಒಪ್ಪಿಕೊಂಡರು.

ಈ ನಡುವೆ ಸಚಿವರು, ಶಾಸಕರು ಮತ್ತು ಪಕ್ಷದ ಹಲವು ನಾಯಕರು ಜನರ ಅಪೇಕ್ಷೆಯಂತೆ ಸಲ್ಲಿಸಿರುವ ಪ್ರಸ್ತಾವನೆಗಳ ಬಗ್ಗೆ ಸಿಎಂ ಜತೆ ರ್ಚಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಅಂತರ್ಜಲ ವೃದ್ಧಿ ಉಪಕ್ರಮ: ಇಲಾಖೆ ವ್ಯಾಪ್ತಿಗೆ ಬರುವ 3,640 ಕೆರೆಗಳ ಪುನಶ್ಚೇತನ, ಏತ ನೀರಾವರಿ ಯೋಜನೆಗಳಡಿ 50:50 ಅನುಪಾತದಲ್ಲಿ ಕೆರೆ ತುಂಬುವುದು ಹಾಗೂ ನೇರ ನೀರಾವರಿ ಸೌಲಭ್ಯ ಕಲ್ಪಿಸುವುದು ಉಪಕ್ರಮಗಳಲ್ಲಿ ಸೇರಿವೆ. ಕೆ.ಸಿ.ವ್ಯಾಲಿಯಡಿ 246 ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿದ್ದರಿಂದ ಅಂತರ್ಜಲ ವೃದ್ಧಿಯಾಗಿದ್ದು, ರೈತರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೆರೆಗಳಲ್ಲಿ ನೀರಿನಮಟ್ಟ ಸದಾ ಇದೇ ರೀತಿ ಕಾಯ್ದುಕೊಳ್ಳುವಂತೆ ಕೋರಿದ್ದಾರೆ. ಎಚ್​ಎನ್ ವ್ಯಾಲಿಯಡಿ ಕೆರೆಗಳ ಭರ್ತಿಗೆ ಕ್ರಮವಹಿಸಿದ್ದು, ಹೊಸಕೋಟೆ ಬಳಿಯ ಕಾಮಗಾರಿಗಿದ್ದ ಅಡ್ಡಿ ನಿವಾರಿಸಿ ವೇಗ ಹೆಚ್ಚಿಸಲಾಗಿದೆ. ರಾಜ್ಯಾದ್ಯಂತ ಅರೆಬರೆ ಅವಸ್ಥೆಯಲ್ಲಿರುವ ಕೆರೆಗಳ ಕಾಮಗಾರಿ ಪೂರ್ಣಗೊಳಿಸಲುಬೇಕಾದ ನೆರವು ಒದಗಿಸಲಾಗಿದೆ ಎಂದರು.

ಅಟಲ್ ಭೂಜಲ ಮರು ಸಮೀಕ್ಷೆ: ಕೇಂದ್ರ ಸರ್ಕಾರದ ಅಟಲ್ ಭೂಜಲ ಯೋಜನೆಯಡಿ 1,700 ಕೋಟಿ ರೂ. ಅಂದಾಜಿನ ಪ್ರಸ್ತಾವನೆಗೆ ಮಂಜೂರಾತಿ ದೊರೆತಿದೆ. ಇದಕ್ಕಾಗಿ ಅಂತರ್ಜಲ ಕುಸಿದ 41 ತಾಲೂಕುಗಳನ್ನು ಈ ಹಿಂದೆ ಆಯ್ಕೆ ಮಾಡಲಾಗಿದೆ. ಆದರೆ ಕೆಸಿ ವ್ಯಾಲಿ, ಎಚ್​ಎನ್ ವ್ಯಾಲಿಯಡಿ ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಯಾಗಿರುವ ಕಾರಣ ಕ್ರಿಯಾ ಯೋಜನೆ ಪರಿಧಿಯಿಂದ ಕೈಬಿಟ್ಟು, ಬಾಧಿತ ಹೊಸ ತಾಲೂಕುಗಳನ್ನು ಸೇರಿಸಬೇಕಾಗಿದೆ. ಈ ಹಿನ್ನೆಲೆ ಕೇಂದ್ರ ಅಂತರ್ಜಲ ಅಭಿವೃದ್ಧಿ ಮಂಡಳಿ ಅಧಿಕಾರಿ ಸುಭೋದ್ ಯಾದವ್ ಜತೆಗೆ ರ್ಚಚಿಸಿದ್ದು, ವಸ್ತುಸ್ಥಿತಿ ಅರ್ಥ ಮಾಡಿಕೊಂಡಿದ್ದಾರೆ.

ಕ್ರಿಯಾ ಯೋಜನೆ ಪರಿಷ್ಕರಣೆ ಉದ್ದೇಶದಿಂದ ಮರು ಸಮೀಕ್ಷೆಗೆ ಒಪ್ಪಿದ್ದು, ಕೇಂದ್ರ ಮತ್ತು ರಾಜ್ಯದ ಜಂಟಿ ತಂಡಗಳು ಶೀಘ್ರದಲ್ಲಿಯೇ ಈ ಕಾರ್ಯ ಕೈಗೆತ್ತಿಕೊಳ್ಳಲಿವೆ. ಸಮೀಕ್ಷಾ ವರದಿ ಕೈಸೇರಿದ ನಂತರ ಸಿಎಂ ಮುಂದಿಟ್ಟು ರ್ಚಚಿಸಿ, ಕೇಂದ್ರ ಸರ್ಕಾರದ ಅನುಮತಿ ಕೋರಿ ಹೊಸ ಪ್ರಸ್ತಾವನೆ ಸಲ್ಲಿಸಲು ತೀರ್ವನಿಸಿರುವೆ ಎಂದು ಸಚಿವರು ವಿವರಿಸಿದರು.

ಬಜೆಟ್​ಗಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಭಾರ!: ಸಣ್ಣ ನೀರಾವರಿ ಇಲಾಖೆಯ ಬಜೆಟ್ ಗಾತ್ರ 2000 ಕೋಟಿ ರೂ. ಹಿಂದಿನ ಸರ್ಕಾರ ತರಾತುರಿಯಲ್ಲಿ 1000 ಕೋಟಿ ರೂ. ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಇದರಿಂದಾಗಿ ಒಟ್ಟು 12 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ಚಾಲ್ತಿಯಲ್ಲಿದ್ದರೆ, 4000 ಕೋಟಿ ರೂ. ಮೊತ್ತದ ಕಾಮಗಾರಿ ಬಿಲ್ ಬಾಕಿ ಪಾವತಿಸಬೇಕಾಗಿದೆ.

ಬಜೆಟ್ ಗಾತ್ರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಹೊರೆ ಇಲಾಖೆ ಹೊತ್ತುಕೊಂಡಿದೆ. ಬಾಕಿ ಬಿಲ್ ಪಾವತಿ, ಚಾಲ್ತಿ ಕಾಮಗಾರಿಗಳ ವಿಷಯದಲ್ಲಿ ಒಂದು ಸಣ್ಣ ಕಪು್ಪ ಚುಕ್ಕೆಯೂ ಅಂಟಿಕೊಳ್ಳದಂತೆ ಪ್ರತಿಯೊಂದನ್ನು ಕೂಲಂಕಷವಾಗಿ ಪರಿಶೀಲಿಸಿ ಪಾವತಿಗೆ ಕ್ರಮವಹಿಸಲಿದ್ದು, ಸಿಎಂ ಕೂಡ ಅನುಮತಿ ನೀಡಿದ್ದಾರೆ ಎಂದು ಬೋಸರಾಜು ಹೇಳಿದರು.

ನಿರಂತರ ನಿಗಾ, ಪರಿಶೀಲನೆಯೇ ಮೇಜರ್ ಸರ್ಜರಿ: ಅಧಿಕಾರಿಗಳು, ಸಿಬ್ಬಂದಿ ವರ್ಗಾವರ್ಗಿ, ಖಡಕ್ ಸೂಚನೆ, ಕ್ರಮದ ಎಚ್ಚರಿಕೆಯಷ್ಟೇ ಸಣ್ಣ ನೀರಾವರಿ ಇಲಾಖೆಗೆ ಮೇಜರ್ ಸರ್ಜರಿ ಅಲ್ಲ ಎಂದು ವ್ಯಾಖ್ಯಾನಿಸಿದ ಎನ್.ಎಸ್.ಬೋಸರಾಜು, ಚಾಲ್ತಿಯಲ್ಲಿರುವ ಪ್ರತಿಯೊಂದು ಕಾಮಗಾರಿ ಹಂತದ ಪರಿಶೀಲನೆ, ಗಡುವು ವಿಧಿಸುವುದು, ಅಡ್ಡ ತಪಾಸಣೆ ಹಾಗೂ ಬೆನ್ನತ್ತಿ ಕೆಲಸ ತೆಗೆದುಕೊಳ್ಳುವುದೇ ಮೇಜರ್ ಸರ್ಜರಿಯಾಗಿದೆ. ಇಲಾಖೆಗಳಲ್ಲಿ ಅನುಮೋದಿತ ಕೆಲವು ಕೆಲಸಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಅವೆಲ್ಲವನ್ನೂ ಗಮನಿಸಿ ತಾಂತ್ರಿಕ, ಆಡಳಿತಾತ್ಮಕ ಕಾರಣಗಳನ್ನು ತಿಳಿದು ಕ್ಲಿಯರ್ ಮಾಡಿರುವೆ. ಸಂಬಂಧಿಸಿದ ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿಪಡಿಸಿ ಮುಂದಿನ ಭೇಟಿಯಲ್ಲಿ ಸಾಧಿಸಿದ ಪ್ರಗತಿ ಮಾಹಿತಿ ಒದಗಿಸಲು ಕಟ್ಟಪ್ಪಣೆ ಮಾಡಿರುವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸೈನ್ಸ್ ಪಾರ್ಕ್

ಚಿಕ್ಕಬಳ್ಳಾಪುರ, ಯಾದಗಿರಿ ಮತ್ತು ರಾಯಚೂರಿನಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಮತ್ತು ಬೆಂಗಳೂರಿನಲ್ಲಿ ಸೈನ್ಸ್ ಪಾರ್ಕ್ ನಿರ್ವಣಕ್ಕೆ ಕೇಂದ್ರ ಸರ್ಕಾರದ ನೆರವು ಕೋರಲಾಗಿದೆ. ಬೆಂಗಳೂರಿನ ಸೈನ್ಸ್ ಪಾರ್ಕ್​ಗೆ 50 ಎಕರೆ ಜಮೀನು ಅಗತ್ಯವಿದ್ದು ಗುರುತಿಸಲಾಗುವುದು. ಮೂರು ವಿಜ್ಞಾನ ಕೇಂದ್ರಗಳನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರಗಳಾಗಿ ಮೇಲ್ದರ್ಜೆಗೇರಲಿವೆ. ಕೇಂದ್ರ ಸಚಿವ ಕಿಶನ್ ರೆಡ್ಡಿಯವರು ಈ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬೋಸರಾಜು ಹೇಳಿದರು. ಚಂದ್ರಯಾನ-3 ಯಶಸ್ಸಿನಲ್ಲಿ ಭಾಗಿಯಾದ ಇಸ್ರೋ ಎಲ್ಲ ವಿಜ್ಞಾನಿಗಳನ್ನು ಸರ್ಕಾರದಿಂದ ಸನ್ಮಾನಿಸಿ ಗೌರವಿಸಲು ಸಿದ್ದರಾಮಯ್ಯ ತೀರ್ವನಿಸಿದ್ದಾರೆ. ವಿಜ್ಞಾನಿಗಳು ಮತ್ತು ಸರ್ಕಾರದಕ್ಕೆ ಅನುಕೂಲಕರ ದಿನಾಂಕ ಗೊತ್ತುಪಡಿಸಬೇಕಾಗಿದ್ದು, ಸೆ.20ರ ನಂತರ ಸನ್ಮಾನ ಸಮಾ ರಂಭ ಏರ್ಪಡಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಅಂತರ್ಜಲ ವೃದ್ಧಿಗೆ ಹೊಸ ಕ್ರಮ

ಸಣ್ಣ ನೀರಾವರಿ ಯೋಜನೆಗಳಿಗೆ ಆರ್ಥಿಕ ಇತಿಮಿತಿಯಲ್ಲಿ ಹೊಸ ಆಯಾಮ ಹಾಗೂ ಅಂತರ್ಜಲ ವೃದ್ಧಿಗೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ. ‘ವಿಜಯವಾಣಿ’ ಕಚೇರಿಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು ಇಲಾಖೆಯ ಮುಂದಿನ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಸಣ್ಣ ನೀರಾವರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಬೇಡಿಕೆಯೂ ಹೆಚ್ಚಿದೆ. ಅಂತರ್ಜಲದ ಮೇಲೆ ಅವಲಂಬನೆ ವಿಪರೀತವಾಗಿ ಅನೇಕ ಸವಾಲುಗಳನ್ನು ತಂದೊಡ್ಡಿದೆ. 3,640 ಕೆರೆಗಳ ಪುನಶ್ಚೇತನ, ಏತ ನೀರಾವರಿ ಯೋಜನೆಗಳಡಿ ಕೆರೆ ತುಂಬುವುದು ಹಾಗೂ ನೇರ ನೀರಾವರಿ ಸೌಲಭ್ಯ ಕಲ್ಪಿಸುವುದು ಇನ್ನಿತರ ಯೋಜನೆಗಳನ್ನು ಭವಿಷ್ಯದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಮುಖ್ಯಾಂಶಗಳು

  • ನಮ್ಮ ಇಲಾಖೆಯಿಂದ 12,096 ಕೋಟಿ ರೂ. ಕಾಮಗಾರಿ ಕೆಲಸ ನಡೆಯುತ್ತಿದೆ. 2,980 ಕೋಟಿ ರೂ. ಬಿಲ್​ಬಾಕಿ ಕೊಡಬೇಕಿದೆ. ಹಣ ಕೊಟ್ಟರೆ ರಿಸಲ್ಟ್ ಬರಲಿದೆ. ಹೀಗಾಗಿ ಗಮನ ಕೊಡಲಾಗುತ್ತಿದೆ. ಗೇರಪ್ ಮಾಡಲು ಸ್ಥಳಕ್ಕೆ ಭೇಟಿಕೊಟ್ಟು ಅಧಿಕಾರಿಗಳ ಸಭೆ ಮಾಡಲಾಗುತ್ತಿದೆ.
  • ಒಟ್ಟು 34 ಸಾವಿರ ಕೆರೆಗಳು ಕೆರೆ ಸಂಕ್ಷಣೆ ಅಭಿವೃದ್ಧಿ ಪ್ರಾಧಿಕಾರದಡಿ ಬರಲಿವೆ. ದೊಡ್ಡ ಕೆರೆಗಳಲ್ಲಿ ಒತ್ತುವರಿಯಾಗಿದ್ದು, ಸರ್ವೆ ಮಾಡುತ್ತಿದ್ದಾರೆ, ಕೆಲವೆಡೆ ಅವಕಾಶ ಕೊಡಲ್ಲ. ಕಂದಾಯ ಸಚಿವರೊಂದಿಗೆ ಸಭೆ ಮಾಡಲಾಗಿದೆ. ಕೆರೆ ಪ್ರಾಧಿಕಾರದ ಜನರಲ್ ಬಾಡಿ ಸಿಎಂ ನೇತೃತ್ವದಲ್ಲಿ ಆಗಬೇಕಾಗಿದೆ.
  • ಕೆರೆ ಬಳಕೆದಾರರ ಸಂಘದ ಮಾದರಿಯಲ್ಲಿ ಜನರಿಗೆ ಕೆರೆಗಳ ಜವಾಬ್ದಾರಿ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ತೀರ್ಮಾನ ಮಾಡುವ ಮುನ್ನ ಕೆರೆ ಅಳತೆ, ನಿರ್ವಹಣೆ ಪದ್ಧತಿ, ಯಾವ ಇಲಾಖೆಯಡಿ ಬರಲಿದೆ ಎಂದು ಮಾಹಿತಿ ಇರಬೇಕಾಗುತ್ತದೆ. ಸೆ.11ರಂದು ವರದಿ ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಳಕೆದಾರರ ಸಂಘ ಮಾಡಿದ ಕೂಡಲೆ ಸಂಘಕ್ಕೆ ಹಣ ಕೊಡಬೇಕಾಗುತ್ತದೆ. ಈ ಬಗ್ಗೆ ಚರ್ಚೆ ಮಾಡಿ ಅಂತಿಮಗೊಳಿಸಲಾಗುತ್ತದೆ.
  • 2018ರಲ್ಲಿ ಸಿದ್ದರಾಮಯ್ಯ ಅಧಿಕಾರ ಬಿಟ್ಟಾಗ ಸಣ್ಣ ನೀರಾವರಿ ಇಲಾಖೆಯಲ್ಲಿ ಬಿಲ್ ಬಾಕಿ 457 ಕೋಟಿ ರೂ. ಇತ್ತು. ಈಗ ಹತ್ತು ಪಟ್ಟು ಹೆಚ್ಚಾಗಿದೆ.
  • ಕೆರೆಗಳ ಪುನರುಜ್ಜೀವನಕ್ಕೆ ನಗರ ಪ್ರದೇಶದಲ್ಲಿ ಸಿಎಸ್​ಆರ್ ನೆರವು ಸಿಗಲಿದೆ. ಅನೇಕರು ಆಸಕ್ತಿ ತೋರಿದ್ದಾರೆ. ಸರ್ಕಾರ ಕೂಡ ಅಪ್ರೋಚ್ ಮಾಡಲಿದೆ. ಕಾರ್ಪೆರೇಟ್​ನವರು ಬೇರೆ ಕ್ಷೇತ್ರಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ.
  • ಇಲಾಖೆಯಿಂದ 414 ಏತ ನೀರಾವರಿ ನಿರ್ವಹಣೆ ಮಾಡುತ್ತಿದ್ದು, ತಿಂಗಳಿಗೆ 13 ಕೋಟಿ ವಿದ್ಯುತ್ ಬಳಕೆಗೆ ಖರ್ಚಾಗುತ್ತಿದೆ. ಸೋಲಾರ್ ಬಳಕೆ ಬಗ್ಗೆ ಚಿಂತನೆ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಈ ವಿಚಾರದಲ್ಲಿ ಗಂಭೀರವಾಗಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಮಾಸಿಕ 25 ಕೋಟಿ ರೂ. ವಿದ್ಯುತ್​ಗಾಗಿ ವೆಚ್ಚವಾಗುತ್ತಿದೆ.