ಬೆಂಗಳೂರು: ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ 'ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮಾಡಿದ್ದಾರೆ' ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಧಾರವಾಡದ ಶೇಠ್ ಮತ್ತು ಮಲ್ಲಯ್ಯ ಹಿರೇಮಠ ಎಂಬುವವರು ಸಿಆರ್ಪಿಸಿ 200ರ ಅಡಿಯಲ್ಲಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್ ಅವರು ದೂರನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಯಾವುದೇ ಸದಸ್ಯರನ್ನು ಕೇಂದ್ರಿಕರಿಸಿ ಹೇಳಿಕೆ ನೀಡಿಲ್ಲ. ಇದರಿಂದ ಕಾನೂನಾತ್ಮಕವಾಗಿ ಯಾವುದೇ ಹಾನಿಯಾಗಿಲ್ಲ. ಅಲ್ಲದೆ ಯಾರ ಘನತೆಗೂ ಧಕ್ಕೆಯಾಗಿಲ್ಲ. ಪ್ರಕರಣದಲ್ಲಿ ದೂರುದಾರರು ಬಾಧಿತರಲ್ಲ ಎಂದು ಉಲ್ಲೇಖಿಸಿ ನ್ಯಾಯಾಲಯ ಅರ್ಜಿ ವಜಾ ಮಾಡಿದೆ.
‘ಈಗಾಗಲೆ ಲಿಂಗಾಯತರೇ ಇಲ್ಲಿ ಚೀಫ್ ಮಿನಿಸ್ಟರ್ ಇದ್ದಾರಲ್ಲ, ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು’ ಎಂದು ಸಿದ್ದರಾಮಯ್ಯ ವರುಣದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿಕೆ ನೀಡುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದರು. 'ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ತಾವು ಬಸವರಾಜ ಬೊಮ್ಮಾಯಿ ಕುರಿತು ಹೇಳಿದ್ದೇ ಹೊರತು ಬೇರೆಯವರ ಬಗ್ಗೆ ಅಲ್ಲ ಎಂದು ಸಿದ್ದರಾಮಯ್ಯ ಸಮಜಾಯಿಷಿಯನ್ನೂ ನೀಡಿದ್ದರು.