ಬೆಂಗಳೂರು: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆ ಇಂದು (ಆಗಸ್ಟ್ 9) ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು. ಸ್ಪಂದನಾ ಅವರ ಮೃತದೇಹ ಪಂಚಭೂತಗಳಲ್ಲಿ ಲೀನವಾಗಿದೆ.
ಈಡಿಗ ಪದ್ಧತಿಯಂತೆ ಸ್ಪಂದನಾ ಅವರ ಅಂತ್ಯಕ್ರಿಯೆ ಮಾಡಲಾಯಿತು. ಪತ್ನಿಯ ಅಂತಿಮ ವಿದಾಯದ ವೇಳೆ ವಿಜಯ ರಾಘವೇಂದ್ರ ಭಾವುಕರಾಗಿದ್ದಾರೆ. ಕುಟುಂಬಸ್ಥರ ಹಗೂ ಸಂಬಂಧಿಕರು ಕಣ್ಣೀರಿನ ವಿದಾಯ ಹೇಳಿದ್ದಾರೆ. ಹರಿಶ್ಚಂದ್ರ ಘಾಟ್ನ ವಿದ್ಯುತ್ ಶವಾಗಾರದಲ್ಲಿ ಅಂತಿಮ ಸಂಸ್ಕಾರ ನಡೆದಿದೆ. ಶವಾಗಾರದ ಎಡಭಾಗದಲ್ಲಿರುವ ಕೊಠಡಿಯಲ್ಲಿ ಅಂತಿಮ ವಿಧಿ-ವಿಧಾನ ನಡೆದಿದೆ.
ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಬ್ಯಾಂಕಾಕ್‌ನಿಂದ ಎಲ್ಲಾ ಪ್ರಕ್ರಿಯೆ ಮುಗಿಸಿ ನಿನ್ನೆ ತಡರಾತ್ರಿ ಸ್ಪಂದನಾ ಮೃತದೇಹ ತರಲಾಯಿತು. ಸ್ಪಂದನಾ ತಂದೆ ಬಿ.ಕೆ ಶಿವರಾಂ ಮನೆಯಲ್ಲಿ ಅಂತಿಮ ನಮನಕ್ಕೆ ಸಿದ್ಧತೆ ಮಾಡಲಾಗಿತ್ತು. ಸಿನಿಮಾ ರಂಗದ ಗಣ್ಯರು, ಆಪ್ತರು, ರಾಜಕೀಯ ಗಣ್ಯರು ಸ್ಪಂದನಾರ ಅಂತಿಮ ದರ್ಶನ ಪಡೆದರು. ಮಧ್ಯಾಹ್ನ 4ಗಂಟೆಯ ನಂತರ ಮಲ್ಲೇಶ್ವರಂ ನಿವಾಸದಿಂದ ಹರಿಶ್ಚಂದ್ರ ಘಾಟ್‌ವರೆಗೂ ಸ್ಪಂದನಾರ ಅಂತಿಮ ಯಾತ್ರೆ ಮಾಡಲಾಯಿತು. ಬಳಿಕ ಈಡಿಗ ಸಂಪ್ರದಾಯದಂತೆ ಪತಿ ರಾಘು- ಪುತ್ರ ಶೌರ್ಯ ಸ್ಪಂದನಾರ ಅಂತಿಮ ಕಾರ್ಯವನ್ನ ಸಲ್ಲಿಸಿದ್ದಾರೆ.