ಟೆಕ್ಸಾಸ್: ಮಂಗಳನ ಅಂಗಳಕ್ಕೆ ಹಾರಿ ಬಿಡಲಾಗುವ ರಾಕೆಟ್ ಮಾದರಿಯನ್ನು ಸ್ಪೇಸ್ಎಕ್ಸ್ ಸಂಸ್ಥೆ ಮಂಗಳವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ. ಗಾಳಿಯಲ್ಲಿ ನೂರಾರು ಅಡಿ ಎತ್ತರಕ್ಕೆ ಹಾರಾಟ ನಡೆಸಿದ ರಾಕೆಟ್ಅನ್ನು ಬಳಿಕ ಮೇಲ್ಮುಖವಾಗಿ ನಿಲ್ಲಿಸುವಲ್ಲಿ ಯಶಸ್ಸು ಸಾಧಿಸಿತು.
ಟೆಕ್ಸಾಸ್ ಸಮೀಪದ ಬ್ರೌನ್ಸ್ವಿಲ್ಲೆಯಲ್ಲಿ ಈ ಹಾರಾಟ ಪ್ರಕ್ರಿಯೆ ಅಂದಾಜು 45 ಸೆಕೆಂಡ್ಗಳ ಕಾಲ ನಡೆದು ಕೇವಲ 500 ಅಡಿ ಎತ್ತರಕ್ಕೆ ನೆಗೆದರೂ ಸ್ಪೇಸ್ಎಕ್ಸ್ ಸಂಸ್ಥೆ ಪಾಲಿಗೆ ಇದು ಮಹತ್ತರ ಬೆಳವಣಿಗೆಯಾಗಿದೆ. ಏಕೆಂದರೆ, ಈ ಮೊದಲಿನ ಪ್ರಯತ್ನಗಳಲ್ಲಿ ರಾಕೆಟ್ಗಳು ಸ್ಫೋಟಗೊಂಡಿದ್ದವು.
ಈ ಪ್ರಯತ್ನ ಕೈಗೂಡುತ್ತಿದ್ದಂತೆ 'ಮಂಗಳ ಗ್ರಹ ನೈಜವಾಗಿ ಕಾಣುತ್ತಿದೆ..! ಈ ದಿಶೆಯಲ್ಲಿ ಪ್ರಗತಿ ಕಾಣುತ್ತಿದ್ದೇವೆ' ಎಂದು ಸಂಸ್ಥೆ ಸಂಸ್ಥಾಪಕ ಹಾಗೂ ಮುಖ್ಯಾಧಿಕಾರಿ ಎಲಾನ್ ಮಸ್ಕ್ ಟ್ವೀಟ್ ಮಾಡಿದರು.
ನೈಜ ರಾಕೆಟ್ಅನ್ನು (ಸ್ಟಾರ್ಶಿಪ್) ಅತಿ ಎತ್ತರಕ್ಕೆ ಹಾರಿಬಿಡುವ ಮುನ್ನ ಇಂಥ ಅನೇಕ ಪ್ರಯೋಗಗಳು ನಡೆಯಲಿವೆ ಎಂದೆ ಮಸ್ಕ್ ಮಾಹಿತಿ ನೀಡಿದ್ದಾರೆ. ನೈಜ ರಾಕೆಟ್ 30 ಮೀಟರ್ ಎತ್ತರದ ಉಕ್ಕಿನ ಗೋದಾಮಿನಂತೆ ಅಥವಾ ಕ್ಯಾನ್ನಂತೆ ಇರಲಿದ್ದು, ಅದರ ಮೇಲೆ ಕ್ಯಾಪ್ ಹಾಕಿದಂತೆ ಕಾಣಲಿದೆ.
ಭೂಕಕ್ಷೆ, ಚಂದ್ರ ಗ್ರಹ ಮಾತ್ರವಲ್ಲದೇ, ಮಂಗಳನ ಅಂಗಳಕ್ಕೂ ಮರುಬಳಕೆ ಮಾಡಬಲ್ಲ ಗಗನನೌಕೆಗಳನ್ನು ಉಡಾಯಿಸುವ ಗುರಿ ಸ್ಪೇಸ್ ಎಕ್ಸ್ ಸಂಸ್ಥೆಯದ್ದಾಗಿದೆ. ಸದ್ಯ ರಾಕೆಟ್ಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಈ ನೌಕೆಗಳಲ್ಲಿ ಸಾಮಗ್ರಿಗಳ ಸಾಗಣೆ ಹಾಗೂ ಮಾನವ ಪ್ರಯಾಣ ನಡೆಯಲಿದೆ.
ಇದನ್ನೂ ಓದಿ; ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್ ಅಧಿಕಾರಿಯಾಗುವುದು…! 50ಕ್ಕೂ ಹೆಚ್ಚು ಜನರು ಯಶಸ್ವಿ; ಒಂದೇ ಕುಟುಂಬದ 13 ಜನ ಪಾಸ್
ಇತ್ತೀಚೆಗೆಷ್ಟೇ ನಾಸಾದ ಗಗನಯಾನಿಗಳು ಸ್ಪೇಸ್ ಎಕ್ಸ್ ತಯಾರಿಸಿದ ಡ್ರ್ಯಾಗನ್ ಗಗನನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಎರಡು ತಿಂಗಳ ಬಳಿಕ ವಾಪಾಸಾಗಿದ್ದರು. ಈ ಯಶಸ್ಸು ಮಂಗಳನ ಯಾನದಲ್ಲೂ ಮರುಕಳಿಸುವ ವಿಶ್ವಾಸ ಸಂಸ್ಥೆಯದ್ದಾಗಿದೆ.