ನ್ಯೂಸ್

ಆದಾಯ ಡಬಲ್​ ಮಾಡ್ತೀವಿ ಅಂದ್ರು, ಮಾಡಿದ್ದೇ ಬೇರೆ: ಬಿಜೆಪಿಗೆ ವಿಪಕ್ಷ ನಾಯಕನ​ ಟಾಂಗ್​

ಲಖನೌ: ಭಾರತೀಯ ಜನತಾ ಪಕ್ಷ(ಬಿಜೆಪಿ) ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಬದಲಿಗೆ ಬೆಲೆ ಏರಿಕೆಯನ್ನು ದುಪ್ಪಟ್ಟುಗೊಳಿಸಿದೆ ಎಂದು ಸಮಾಜವಾದಿ ಪಾರ್ಟಿ(ಎಸ್​​ಪಿ) ಮುಖ್ಯಸ್ಥ ಅಖಿಲೇಶ್​ ಯಾದವ್​ ವ್ಯಂಗ್ಯ ಮಾಡಿದ್ದಾರೆ.

ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದ ಲಖನೌನಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, "ಬಿಜೆಪಿಯ ಕಮಲವು ಸುಳ್ಳು ಮತ್ತು ಮೋಸದ ಕೊಚ್ಚೆಯಲ್ಲಿ ಬೆಳೆಯುತ್ತದೆ" ಎಂದು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯನ್ನು ಮರೆತುಬಿಟ್ಟಿದೆ ಎಂದ ಯಾದವ್​, ರೈತರಿಗೆ ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಲಖೀಂಪುರ್​ನ ಮಂಡಿಯಲ್ಲಿ ಒಬ್ಬ ರೈತ ತನ್ನ ಭತ್ತದ ಬೆಳೆಯನ್ನು ಸುಟ್ಟುಹಾಕಿದ. ತಮಗೆ ಸಿಗಬೇಕಾದ ಬೆಲೆ ಸಿಗುತ್ತದಾ ಎಂದು ರೈತರು ತಿಳಿಯಬಯಸಿದ್ದಾರೆ. ಆದರೆ ಅವರಿಗೆ ಉತ್ತರ ಕೊಡುವವರು ಯಾರೂ ಇಲ್ಲ" ಎಂದರು.