ನ್ಯೂಸ್

23ನೇ ವಯಸ್ಸಿಗೆ ಜೀವನದಲ್ಲಿ ಎಲ್ಲವನ್ನೂ ಅನುಭವಿಸಿದೆ: ಸೋನು ಗೌಡ

ಬೆಂಗಳೂರು: ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರೀಲ್ಸ್​ರಾಣಿ, ಬಿಗ್​ಬಾಸ್​ ಒಟಿಟಿ ಮಾಜಿ ಸ್ಪರ್ಧಿ ಸೊನು ಶ್ರೀನಿವಾಸ್​ ಗೌಡ ಜೈಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವ್ಲಾಗ್​ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಈ ಕುರಿತು ಮಾತನಾಡಿರುವ ಸೋನು ಮೊದಲಿಗೆ ಪೊಲೀಸರು ಕಾನೂನಾತ್ಮಕವಾಗಿ ವಿಚಾರಣೆ ನಡೆಸಿದರು. ಆ ಬಳಿಕ ನನ್ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು. ನಾಲ್ಕು ಗೋಡೆ, ಅಲ್ಲಿನ ಜನ ನೋಡಿ ನನಗೆ ಇದೆಲ್ಲ ಬೇಕಿತ್ತಾ ಅನಿಸಿತು. ಬೇರೆ ಬೇರೆ ಪ್ರಕರಣ ಮಾಡಿದವರು ಅಲ್ಲಿದ್ದರು. ಮೂರು ದಿನಕ್ಕೆ ಒಮ್ಮೆ ಫೋನ್ ಕೊಡ್ತಾರೆ. 3-4 ನಿಮಿಷ ಮಾತನಾಡಲು ಮೂರು ದಿನ ಕಾಯಬೇಕು. ಇದರಿಂದ ವ್ಯಕ್ತಿಯ ಬೆಲೆ ಗೊತ್ತಾಗುತ್ತದೆ. ನಾಲ್ಕು ಗೋಡೆ ಮಧ್ಯೆ ಇದ್ದು ಎಲ್ಲವೂ ಕಲಿತೆ ಎಂದು ಹೇಳಿದ್ದಾರೆ.

ಜೈಲಿನಲ್ಲಿ ಸೊಳ್ಳೆ ಕಾಟ ತುಂಬಾನೆ ಇದೆ. 23ನೇ ವಯಸ್ಸಿಗೆ ಜೈಲು ನೋಡಿದ್ನಲ್ಲ ಅನ್ನೋ ಬೇಸರ ತುಂಬಾನೇ ಇದೆ. ಆದರೆ, ಕೆಟ್ಟದು ಅಥವಾ ಒಳ್ಳೆಯದಿರಲಿ ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕು ಆ ಬಗ್ಗೆ ನನಗೆ ಖುಷಿ ಇದೆ. ಜೈಲಿನಲ್ಲಿ ಇರಬೇಕಾದರೆ ಯಾರೂ ಇಲ್ಲದೇ ತುಂಬಾನೇ ಕಷ್ಟಪಟ್ಟಿದ್ದೀನಿ. ಅನೇಕ ಟ್ರೋಲ್​ ಪೇಜ್​ಗಳು ತುಂಬಾನೆ ಸಹಾಯ ಮಾಡಿವೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನದು ಸಣ್ಣ ಸರ್ಕಲ್​ ಎಲ್ಲರೂ ನನ್ನ ಬೆಂಬಲಕ್ಕೆ ನಿಂತರು ಪ್ರಕರಣದ ಕುರಿತಾಗಿ ಇನ್ನೂ ಹೆಚ್ಚಿನದ್ದು ಹೇಳೋಕೆ ಸಾಧ್ಯವಿಲ್ಲ ಎಂದು ಸೋನು ಶ್ರೀನಿವಾಸ್​ ಗೌಡ ಹೇಳಿದ್ದಾರೆ.