ನ್ಯೂಸ್

'ನೀನಿಲ್ಲದ ಈ ಜಗತ್ತು ಸುಂದರವಲ್ಲ': ನಟ ಸೋನುಸೂದ್ ಭಾವುಕ

ಮುಂಬೈ: ಬಾಲಿವುಡ್ ನಟ ಸೋನುಸೂದ್ ತನ್ನ ತಾಯಿ ಸರೋಜ್ ಸೂದ್ ಅವರ ಜನ್ಮವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಾವುಕರಾಗಿದ್ದಾರೆ. ಆಕೆಯನ್ನು ನೆನೆದು ಸಾಮಾಜಿಕ ಮಾಧ್ಯಮ 'x'ನಲ್ಲಿ ಭಾನುವಾರ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಇದು ವೈರಲ್​ ಆಗಿದೆ.

'ಅಮ್ಮಾ..ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ನೀನಿಲ್ಲದೆ ಈ ಜಗತ್ತು ಸುಂದರವಲ್ಲ, ಶೂನ್ಯ. ನೀನು ನನಗೆ ಕಲಿಸಿದ ತತ್ವಾದರ್ಶ, ನೈತಿಕ ಮೌಲ್ಯಗಳೊಂದಿಗೆ ನಾನು ನನ್ನ ಜೀವನವನ್ನು ದುವರಿಸುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಯಿಂದ ಸ್ಪರ್ಶಿಸಲು ಬಯಸುತ್ತೇನೆ. ನಾನು ನಿನ್ನನ್ನು ಎಷ್ಟು ಕಳೆದುಕೊಂಡಿದ್ದೇನೆ ಎಂದು ಹೇಳಲು ಬಯಸುತ್ತೇನೆ. ನೀನು ನನಗೆ ತೋರಿಸಿದ ಹಾದಿಯಲ್ಲಿ ಸಾಗುವಾಗ ಪ್ರತಿ ಕ್ಷಣ ನಾನು ನಿನ್ನನ್ನು ನೆನೆಯುತ್ತೇನೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮಾ' ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಕರೋನಾ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡುವ ಮೂಲಕ ಸೋನು ಸೂದ್ ನಿಜವಾದ ಹೀರೋ ಎಂದು ಖ್ಯಾತಿಗಳಿಸಿದರು. ಆ ನಂತರ ಅವರು ಸಹಾಯ ಕೇಳಿದವರಿಗೆ ಇಲ್ಲ ಎನ್ನದೆ ಸಹಾಯ ಮಾಡಿದರು. ಇದೇ ಕಾರ್ಯಕ್ರಮದಲ್ಲಿ ಸೂದ್ ಚಾರಿಟೇಬಲ್ ಫೌಂಡೇಶನ್ ಆಶ್ರಯದಲ್ಲಿ ಅವರು 2022 ರಲ್ಲಿ ತಮ್ಮ ತಾಯಿ ಸರೋಜ್ ಸೂದ್ ಅವರ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನು ನೀಡುವ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿ ವೇತನದ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.