ಕಾರಣವಿಲ್ಲದೆ 7ತಿಂಗಳ ಶಿಶು, ದಂಪತಿ ಮೇಲೆ ಗುಂಡುಹಾರಿಸಿದ ಮಹಿಳೆ! ಕೊನೆಗೆ ಏನಾಯ್ತು?

america
Published on

ವಾಷಿಂಗ್ಟನ್​: ಅಮೆರಿಕದಲ್ಲಿ ಇತ್ತೀಚೆಗೆ ಕಾರಣವಿಲ್ಲದಿದ್ದರೂ ಗುಂಡಿಟ್ಟು ಕೊಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಮಹಿಳೆಯೊಬ್ಬಳು ಮೃಗದಂತೆ ವರ್ತಿಸಿದ್ದಾಳೆ. ಅವಳು 7ತಿಂಗಳ ಶಿಶು ಸೇರಿದಂತೆ ಅಪರಿಚಿತರ ಮೇಲೆ ಮನಸೋ ಇಷ್ಷೆ ಪಿಸ್ತೂಲ್​ನಿಂದ ಗುಂಡು ಹಾರಿಸಿದ್ದಾಳೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹುಚ್ಚಾಟ ಮೆರೆದ ಮಹಿಳೆಯನ್ನು ಫಿಲಡೆಲ್ಫಿಯಾದ ಡೊಮಿನಿಕ್ ಫಿಲಿಪ್ಸ್ ಎಂದು ಗುರುತಿಸಲಾಗಿದೆ. ಈಕೆಯನ್ನು ಬಂಧಿಸಿದ್ದು, ಗುಂಡು ಹಾರಿಸಲು ಏನು ಕಾರಣ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ಫಿಲಡೆಲ್ಫಿಯಾದ ಹೋಮ್ಸ್‌ಬರ್ಗ್ ನಲ್ಲಿ ಕಳೆದ ವಾರ ಈ ಅಮಾನವೀಯ ಘಟನೆ ನಡೆದಿದೆ. ತಮ್ಮ ಏಳು ತಿಂಗಳ ಮಗುವಿನೊಂದಿಗೆ ಸ್ಟ್ರಾಲರ್‌ನಲ್ಲಿ ಮನೆಯ ಹೊರಗೆ ನಡೆದು ಹೋಗುತ್ತಿದ್ದ ದಂಪತಿ ಮೇಲೆ ಫಿಲಿಪ್ಸ್ ಗುಂಡು ಹಾರಿಸಿದ್ದಾಳೆ. ಗುಂಡಿನ ದಾಳಿಯಿಂದ ದಂಪತಿ ಪಾರಾಗಿದ್ದಾರೆ. ಆದರೆ ಮಗುವಿನ ಕಾಲಿಗೆ ಗುಂಡು ತಗುಲಿದೆ. ಕೂಡಲೇ ದಂಪತಿ ತಮ್ಮ ಮಗುವಿನೊಂದಿಗೆ ಆಸ್ಪತ್ರೆಗೆ ಧಾವಿಸಿದ್ದಾರೆ.

ಘಟನೆ ನಡೆದ ಕೂಡಲೇ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ತನ್ನ ತಂದೆ ಮೇಲಿನ ಕೋಪದಿಂದ ಆರೋಪಿ ಮಹಿಳೆ ಅಪರಿಚಿತರ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net