ನ್ಯೂಸ್

ಅವರಿನ್ನು ನನ್ನ ಜವಾಬ್ದಾರಿ ... ಮೂರು ಮಕ್ಕಳನ್ನು ದತ್ತು ಪಡೆದ ಸೋನು

manjunathktgns

ಕಳೆದ ಕೆಲವು ತಿಂಗಳುಗಳಿಂದ ಸೋನು ಸೂದ್​ ಜನ ಮೆಚ್ಚುವಂತಹ ಕೆಲಸಗಳನ್ನು ಅದೆಷ್ಟು ಮಾಡಿದರೋ ಲೆಕ್ಕ ಇಟ್ಟವರಿಲ್ಲ. ಹಸಿದವರಿಗೆ ಊಟ ಕೊಟ್ಟರು. ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿದರು. ಕೆಲಸವಿಲ್ಲದವರಿಗೆ ಆಪ್​ ಶುರು ಮಾಡಿ, ಕೆಲಸ ಕೊಡಿಸುವ ಪ್ರಯತ್ನ ಮಾಡಿದರು. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಲೇ ಬಂದಿರುವ ಸೋನು, ಇದೀಗ ಮೂರು ಮಕ್ಕಳನ್ನು ದತ್ತು ಪಡೆದಿದ್ದಾರೆ.

ಹೌದು, ತೆಲಂಗಾಣ ರಾಜ್ಯದ ಯಾದಾದ್ರಿ-ಬೊಂಗಿರ್​ ಜಿಲ್ಲೆಯ ಆತ್ಮಾಕುರ್​ ಎಂಬ ಹಳ್ಳಿಯಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡಿರುವ ಮೂರು ಮಕ್ಕಳನ್ನು ಸೋನು ದತ್ತು ಪಡೆದಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಇನ್ನು ಮುಂದೆ ಅವರು ಅನಾಥರಲ್ಲ. ಅವರು ನನ್ನ ಜವಾಬ್ದಾರಿ' ಎಂದು ಹೇಳಿಕೊಂಡಿದ್ದಾರೆ.

ತೆಲಂಗಾಣದಲ್ಲಿರುವ ಮಕ್ಕಳ ಬಗ್ಗೆ ಸೋನುಗೆ ಹೇಗೆ ಗೊತ್ತಾಯಿತು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಈ ವಿಷಯವಾಗಿ ಸೋನು ಅವರ ಗಮನ ಸೆಳೆದಿದ್ದು ರಾಜೇಶ್​ ಕರಣಂ ಎನ್ನುವವರು. ಈ ಕುರಿತು ಸೋನುಗೆ ಟ್ವೀಟ್​ ಮಾಡಿದ್ದ ಅವರು, ತೆಲಂಗಾಣ ರಾಜ್ಯದ ಮೂರು ಮಕ್ಕಳಿಗೆ ಸ್ವಂತದವರು ಯಾರೂ ಇಲ್ಲ. ಅವರು ನಿಮ್ಮ ಸಹಾಯ ಕೇಳುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ ಎಂದು ಟ್ವಿಟರ್​ ಮೂಲಕ ಗಮನಸೆಳೆದಿದ್ದರು. ಅಷ್ಟೇ ಅಲ್ಲ, ಆ ಮಕ್ಕಳ ವಿಡಿಯೋ ಸಹ ಹಂಚಿಕೊಂಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸೋನು ಅವರ ತಂಡದವರು, ಆ ಮೂರು ಮಕ್ಕಳನ್ನು ಸಂಪರ್ಕಿಸಿದ್ದಾರೆ.

ಈ ಮೂರು ಮಕ್ಕಳ ತಂದೆ, ಕಳೆದ ವರ್ಷ ನಿಧನರಾಗಿದ್ದರು. ಇನ್ನು ಅವರ ತಾಯಿ ಅನಾರೋಗ್ಯದಿಂದ ಕಳೆದ ವಾರ ಮೃತಪಟ್ಟರಂತೆ. ಆ ನಂತರ ಇವರನ್ನು ನೋಡಿಕೊಳ್ಳುವುದಕ್ಕೆ ಯಾರೆಂದರೆ ಯಾರೂ ಇಲ್ಲ. ಸಂಬಂಧಿಕರು ಸಹ ಯಾರೂ ಇಲ್ಲವಾದ್ದರಿಂದ, ಮಕ್ಕಳು ಅಕ್ಷರಶಃ ಅನಾಥರಾಗಿದ್ದಾರೆ. ಇದು ದೊಡ್ಡ ಸುದ್ದಿಯಾಗಿ, ಹೇಗೋ ಸೋನುವರೆಗೂ ತಲುಪಿದೆ. ಈಗ ಸೋನು ಆ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.