ನ್ಯೂಸ್

ಕುಡುಕ ತಂದೆಯನ್ನು ಕತ್ತಿಯಿಂದ ಕಡಿದು ಕೊಂದ ಮಕ್ಕಳು

lakshmihegde

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಮೇಲಿನ ಮುಗ್ಗದ ಆನೆಪಲ್ಲ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ಮದ್ಯ ಸೇವಿಸಿ ಜಗಳವಾಡಿದ ತಂದೆಯನ್ನು ಮಕ್ಕಳಿಬ್ಬರು ಕೊಲೆ ಮಾಡಿದ್ದಾರೆ. ಧರ್ಣಪ್ಪ ಪೂಜಾರಿ ಯಾನೆ ಕೊರಗಪ್ಪ ಪೂಜಾರಿ(61) ಕೊಲೆಯಾದವರು.

ಮಕ್ಕಳಾದ ಮೋನಪ್ಪ ಪೂಜಾರಿ(34) ಮತ್ತು ನವೀನ(30) ಆರೋಪಿಗಳು. ಧರ್ಣಪ್ಪ ಪೂಜಾರಿ ಮದ್ಯ ವ್ಯಸನಿಯಾಗಿದ್ದು, ಮನೆಯವರಿಗೆ ಹಿಂಸೆ ನೀಡುತ್ತಿದ್ದರೆನ್ನಲಾಗಿದೆ. ಧರ್ಣಪ್ಪ ಮನೆಯ ಪಕ್ಕದಲ್ಲೇ ಅವರ ಸಹೋದರನ ಮನೆಯಿದ್ದು, ಭಾನುವಾರ ಮಧ್ಯಾಹ್ನ ಅಲ್ಲಿ ದೈವಗಳಿಗೆ ತಂಬಿಲ ಸೇವೆ ಇತ್ತು. ಕಾರ್ಯಕ್ರಮದಲ್ಲಿ ಮಕ್ಕಳು ತೆರಳಿದ್ದರು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಜಗಳವಾಡಿದ್ದ ಧರ್ಣಪ್ಪ, ಮನೆಗೆ ಬಂದಾಗಲೂ ಜಗಳ ಕಾಯ್ದು ಕತ್ತಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದರೆನ್ನಲಾಗಿದೆ. ಈ ವೇಳೆ ಮಕ್ಕಳು ಅದೇ ಕತ್ತಿಯಲ್ಲಿ ತಂದೆಗೆ ಕಡಿದಿದ್ದು, ಅಡಕೆ ಮರದ ಸಲಾಕೆಯಿಂದಲೂ ಹಲ್ಲೆ ನಡೆಸಿದ್ದಾರೆ.