ನ್ಯೂಸ್

ವಿಶ್ವಸಂಸ್ಥೆಯಲ್ಲಿ ಗಾಜಾ ಮತದಾನಕ್ಕೆ ಭಾರತ ಗೈರು: ಸೋನಿಯಾ ಗಾಂಧಿ ವಿರೋಧ

ನವದೆಹಲಿ: ಇಸ್ರೇಲ್-ಹಮಾಸ್ ಸಂಘರ್ಷದ ಕುರಿತ ವಿಶ್ವಸಂಸ್ಥೆಯ ಇತ್ತೀಚಿನ ನಿಣಾಯಕ ಸಭೆಗೆ ಭಾರತ ಗೈರುಹಾಜರಾಗಿರುವುದನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತದೆ ಎಂದು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ತಿಳಿಸಿದರು.

ಹಮಾಸ್ ದಾಳಿಯನ್ನು ತಮ್ಮ ಪಕ್ಷವು ನಿಸ್ಸಂದಿಗ್ಧವಾಗಿ ಖಂಡಿಸಿದ್ದರೂ, ಈಗ ಪರಿಸ್ಥಿತಿ ಜಟಿಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಇಸ್ರೇಲ್​ ನಿರ್ದೋಷಿಯಾಗಿರುವಂತೆ ಕಂಡರೂ, ಪ್ಯಾಲೆಸ್ತೇನ್​ನ ಅಸಹಾಯಕ ಜನರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ. ಇಸ್ರೇಲ್‌ನೊಂದಿಗೆ ಶಾಂತಿ, ಸಹಬಾಳ್ವೆ ನಡೆಸುವ ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ತೇನ್​ ರಾಜ್ಯವಾಗುವ ಅಗತ್ಯವಿದೆ. ಇದಕ್ಕಾಗಿ ನೇರ ಮಾತುಕತೆ ಅಗತ್ಯವಿದೆ. ಇದನ್ನು ಬೆಂಬಲಿಸುವುದು ಕಾಂಗ್ರೆಸ್​ ಪಕ್ಷದ ದೀರ್ಘಕಾಲದ ನಿಲುವಾಗಿದೆ ಎಂದು ಅವರು ಹೇಳಿದರು.

ಇಸ್ರೇಲ್ ಮೇಲಿನ ಕ್ರೂರ ದಾಳಿಯಿಂದ ನಾವೆಲ್ಲ ಕುಗ್ಗಿಹೋಗಿದ್ದೆವು. ಆದರೆ ಇಸ್ರೇಲ್‌ನ ಅಷ್ಟೇ ಕ್ರೂರ ಪ್ರತಿಕ್ರಿಯೆಯಿಂದ ನಾವೆಲ್ಲ ಮತ್ತೆ ಕುಗ್ಗಿಹೋಗಿದ್ದೇವೆ. ಇಸ್ರೇಲ್​ ವಿವೇಚನಾರಹಿತ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನು ನಿಲ್ಲಿಸಲು ಗಟ್ಟಿಯಾದ ಧ್ವನಿ ಮೊಳಗಬೇಕು ಎಂದು ತಿಳಿಸಿದರು.

ಹಮಾಸ್​ ಮೇಲಿನ ಇಸ್ರೇಲ್‌ ದಾಳಿ ವಿನಾಶಕಾರಿಯಾಗಿದೆ. ಸಭ್ಯ ಜಗತ್ತಿನಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಕಾಂಗ್ರೆಸ್ ಬಲವಾಗಿ ನಂಬುತ್ತದೆ. ಹೀಗಾಗಿಯೇ ಇಸ್ರೇಲ್​ ಮೇಲಿನ ಹಮಾಸ್​ ದಾಳಿಯನ್ನು ಮರುದಿನವೇ ನಾವು ಖಂಡಿಸಿದೆವು ಎಂದು ಅವರು ಹೇಳಿದರು.

ಇಸ್ರೇಲ್-ಪ್ಯಾಲೆಸ್ತೀನ್ ವಿಚಾರದಲ್ಲಿ ಕಾಂಗ್ರೆಸ್ ನಿಲುವನ್ನು ವಿವರಿಸಿದ ಅವರು, ನ್ಯಾಯವಿಲ್ಲದೆ ಶಾಂತಿ ಸಾಧ್ಯವಿಲ್ಲ ಎಂದು ಹೇಳಿದರು. ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಇಸ್ರೇಲ್‌ನ ನಿರಂತರ ದಿಗ್ಬಂಧನವು ಗಾಜಾವನ್ನು "ತೆರೆದ ಜೈಲು" ಸ್ಥಿತಿಗೆ ಇಳಿಸಿದೆ ಎಂದು ಅವರು ಹೇಳಿದರು.

ಪ್ಯಾಲೆಸ್ಟೀನಿಯನ್ನರು ಮತ್ತು ಇಸ್ರೇಲಿಗಳು ನ್ಯಾಯಯುತ ಮತ್ತು ಶಾಂತಿಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ ಕಾಂಗ್ರೆಸ್ ಪ್ರತಿಪಾದಿಸುತ್ತ ಬಂದಿರುವುದು ಇದನ್ನೇ ಎಂದು ಅವರು ಹೇಳಿದರು.