ಕೋಝಿಕ್ಕೋಡ್: ಅಪ್ರಾಪ್ತ ವಯಸ್ಕರಲ್ಲಿ ಸ್ಮಾರ್ಟ್ಫೋನ್ ಚಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಊಟ ಮಾಡಲು ಬೇಕು ಮೊಬೈಲ್, ನಿದ್ರೆಗೆ ಜಾರುವಾಗಲೂ ಬೇಕಿದೆ ಮೊಬೈಲ್. ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿರುವ ಈ ಗೀಳು, ಪೋಷಕರಲ್ಲಿ ಭಾರೀ ಆತಂಕ ಸೃಷ್ಟಿಸುತ್ತಿದೆ. ಕೆಲವರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ, ಒಂದೆರೆಡು ಏಟು ಬಾರಿಸಿ, ಕಸಿದುಕೊಂಡರೆ, ಇನ್ನೂ ಕೆಲವು ಪೋಷಕರು ಎಷ್ಟೇ ಬುದ್ಧಿ ಮಾತು ಹೇಳಿದರು ಮಕ್ಕಳು ಬಗ್ಗದೆ, ತಂದೆ-ತಾಯಿಗೆ ತಿರುಗಿ ಮಾತನಾಡುತ್ತಾರೆ. ಸದ್ಯ ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಮೊಬೈಲ್ ಕೊಡದ ಅಮ್ಮನಿಗೆ ಅಪ್ರಾಪ್ತ ಬಾಲಕನೊಬ್ಬ ಚಾಕು ಇರಿದಿದ್ದಾನೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಅಧಿಕಾರಕ್ಕಾಗಿ ಅಂತರ್ಯುದ್ಧ; ಜೆಡಿಎಸ್ ಲೇವಡಿ|war for power in Congress; JDS mockery
ಕೇರಳದ ಕೋಝಿಕ್ಕೋಡ್ನ ತಿಕ್ಕೋಡಿಯ 14ರ ಹರೆಯದ ಬಾಲಕ ಮೊಬೈಲ್ ಕೊಡಲು ನಿರಾಕರಿಸಿದ ಕಾರಣಕ್ಕೆ ತಾಯಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಈ ಘಟನೆ ಶನಿವಾರ (ಡಿ.07) ರಾತ್ರಿ ಸಂಭವಿಸಿದ್ದು, ಗೇಮ್ಸ್ ಆಡಬೇಕು ಮೊಬೈಲ್ ಕೊಡಿ ಎಂದು ಮಗ ತನ್ನ ತಾಯಿ ಬಳಿ ಕೇಳಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ, ಮಗ ಎಷ್ಟೇ ಕೇಳಿದರೂ ಸಹ ಸ್ಮಾರ್ಟ್ಫೋನ್ ಕೊಟ್ಟಿಲ್ಲ. ಇದರಿಂದ ಕೆರಳಿದ ಬಾಲಕ, ಚಾಕುವಿನಿಂದ ತಾಯಿಗೆ ಇರಿದಿದ್ದಾನೆ.
ಅದೃಷ್ಟವಶಾತ್ ಮಹಿಳೆ ಪ್ರಾಣಪಾಯದಿಂದ ಬಚಾವ್ ಆಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಲಕ ಶಾಲೆ ತ್ಯಜಿಸಿದ್ದು, ಮೊಬೈಲ್ ಗೇಮಿಂಗ್ ಚಟಕ್ಕೆ ದಾಸನಾಗಿದ್ದ ಎಂದು ವರದಿ ಉಲ್ಲೇಖಿಸಿದೆ. ಪಯ್ಯೋಳಿ ಪೊಲೀಸರು ಮಹಿಳೆ ಮತ್ತು ಬಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).