ನ್ಯೂಸ್

ಜಿರಳೆಗಳು ತುಂಬಿದ್ದ ಮನೇಲಿ ಮಗನನ್ನು ಬಂಧಿಸಿ ಫ್ರೆಂಡ್ಸ್​ ಭೇಟಿಗೆ ಹೋದಳು: 8 ದಿನದ ಬಳಿಕ ಬಂದವಳಿಗೆ ಶಾಕ್​!

ಮಾಸ್ಕೋ: ಜಿರಳೆಗಳೇ ತುಂಬಿದ್ದ ಮನೆಯಲ್ಲಿ ಹತ್ತು ವರ್ಷದ ಮಗನನ್ನು ಸುಮಾರು 8 ದಿನಗಳವರೆಗೆ ಕೂಡಿಹಾಕಿ, ತಿನ್ನಲು ಅಕ್ಕಿ ಮಾತ್ರ ನೀಡಿ ತನ್ನ ​ಫ್ರೆಂಡ್ಸ್​​ ನೋಡಲು ಹೋಗಿದ್ದ ಮಹಿಳೆಗೆ ವಾಪಸ್ಸು ಬರುವಷ್ಟರಲ್ಲಿ ಆಘಾತವೊಂದು ಕಾದಿತ್ತು.

ಒಂಟಿಯಾಗಿ ನಾಲ್ಕು ದಿನ ಕತ್ತಲೆ ಕೂಪದಲ್ಲಿ ಕಳೆದಿದ್ದ ಬಾಲಕ ಹಸಿವಿನಿಂದ ಬಳಲಿ ಸಹಾಯಕ್ಕಾಗಿ ಕೂಗಾಡಿದ್ದ. ಅದೃಷ್ಟವಶಾತ್ 4 ದಿನಗಳ ಬಳಿಕ ನೆರೆ ಮನೆಯವರು ಆತನನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಮಗ ಮಿಖೈಲ್​, ಹಸಿವಿನಿಂದ ಸಾಯಲು ಕಾರಣವಾಗುತ್ತಿದ್ದ ಮಹಿಳೆ ನಟಲ್ಯಾ ಅಜರೆನ್ಕೋವಾ (31)ಳನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ.

ಮಾಸ್ಕೋದ ಪೆರೆಡೆಲ್ಕಿನೋ ಏರಿಯಾದಲ್ಲಿರುವ ಅಪಾರ್ಟ್​ಮೆಂಟ್​ ಒಂದರಲ್ಲಿ ಬಾಲಕ ರಕ್ಷಣೆ ಮಾಡಲಾಗಿದ್ದು, ಆ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಮನೆಯನ್ನು ಹೊರಗಿನಿಂದ ಲಾಕ್​ ಮಾಡಲಾಗಿತ್ತು. ರಕ್ಷಣೆಗೆ ಬಂದವರ ಬಳಿ ಬಾಲಕ ತುರ್ತಸೇವೆ ಕರೆ ಮಾಡಬೇಡಿ ಎಂದು ಬೇಡಿಕೊಂಡಿದ್ದ. ಏಕೆಂದರೆ, ಅವರು ಅನಾಥಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಮತ್ತೆ ತನ್ನ ತಾಯಿಯನ್ನು ನೋಡಲು ಆಗುವುದಿಲ್ಲ ಎಂಬ ಭಯದಿಂದ ತುರ್ತುಸೇವೆ ಬೇಡವೆಂದು ನಿರಾಕರಿಸಿದ್ದ.

ಬಾಲಕ ಸುಮಾರು 4 ದಿನ ಏಕಾಂಗಿಯಾಗಿ, ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ, ಜಿರಳೆಗಳೇ ಮುತ್ತಿಕೊಂಡಿದ್ದ ಮನೆಯಲ್ಲಿ ನರಕ ದರ್ಶನ ಮಾಡಿದ್ದ. ಆ ಕುರಿತು ಮಾತನಾಡಿರುವ ಮಿಖೈಲ್​, ಕೇವಲ ಅಕ್ಕಿ ಮಾತ್ರ ನೀಡಿ ನನ್ನೊಬ್ಬನನ್ನೇ ಬಿಟ್ಟು ನಾಯಿಯನ್ನು ವಾಕಿಂಗ್​ ಕರೆದೊಯ್ಯುವುದಾಗಿ ತಾಯಿ ಹೊರ ಹೋದಳು. ಅಡುಗೆ ಮಾಡಿಕೊಳ್ಳಲು ನೀರು ಸಹ ನೀಡಲಿಲ್ಲ ಎಂದಿದ್ದಾನೆ.

ರಕ್ಷಣೆ ಮಾಡುವ ಮುನ್ನ ಮನೆ ಲಾಕ್​ ಆಗಿದ್ದರಿಂದ ನೆರ ಮನೆಯವರೇ ಬಾಲಕನಿಗೆ ಆಹಾರ ಮತ್ತು ಜ್ಯೂಸ್ ನೀಡುತ್ತಿದ್ದರು. ಆದರೆ, ಬಾಲಕನ ತಾಯಿ ಬರದೇ ಇರುವುದನ್ನು ಗಮನಿಸಿದ ನೆರೆಯವರು ತಕ್ಷಣ ತುರ್ತುಸೇವೆಗೆ ಕರೆ ಮಾಡಿ ಬಾಲಕನನ್ನು ರಕ್ಷಿಸಿದ್ದಾರೆ. ಜಿರಳೆಗಳೇ ಇರುವ ಅಪಾರ್ಟ್​ಮೆಂಟ್​ನಲ್ಲಿ ಬಾಲಕ ಹೇಗೆ 4 ದಿನಗಳವರೆಗೆ ಬದುಕಿದ್ದ ಎಂಬುದೇ ಅಚ್ಚರಿಯೆಂದು ನೆರೆಯವರು ತಿಳಿಸಿದ್ದಾರೆ.

ಇತ್ತ ಬಾಲಕನ ತಾಯಿ ಮಾತ್ರ 8 ದಿನಗಳ ಬಳಿಕ ಮನೆಗೆ ಮರಳಿದ್ದಳು. ಅಷ್ಟರಲ್ಲಾಗಲೇ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಎರಡು ವರ್ಷಗಳ ಹಿಂದಷ್ಟೇ ಬಾಲಕನ ತಂದೆ ಮೃತಪಟ್ಟಿದ್ದಾರೆ. ಸದ್ಯ ಆತನ ತಾಯಿಯನ್ನು ಬಂಧಿಸಲಾಗಿದ್ದು, ಕೇವಲ ಎರಡು ದಿನಗಳವರೆಗೆ ಮಾತ್ರ ಫ್ರೆಂಡ್ಸ್​ ಭೇಟಿಗೆ ತೆರಳಿದ್ದೆ ಎಂದಿದ್ದಾಳೆ. ಆದರೆ, 8 ದಿನಗಳ ಬಳಿಕ ಬಂದಿದ್ದೇಕೆ ಎಂಬ ಪ್ರಶ್ನೆಗೆ ಆಕೆಯಿಂದ ಉತ್ತರ ಬಂದಿಲ್ಲ. ಇದರ ನಡುವೆ ನನ್ನ ಮಗ ಬೇಕು. ನಾನು ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇನೆಂದು ಪೊಲೀಸರಿಗೆ ಹೇಳಿದ್ದಾಳೆ. ಆದರೂ ಸದ್ಯ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. (ಏಜೆನ್ಸೀಸ್​)