ಬಾಗಲಕೋಟೆ: ಆಸ್ತಿ ವಿವಾದಕ್ಕೆ ಭಾರಿ ಜಗಳ, ಹೊಡೆದಾಟ, ಕೊಲೆ ಕೂಡ ನಡೆಯವುದು ಸಾಮಾನ್ಯ. ಆದರೆ ಇಲ್ಲೊಬ್ಬ ಬರೀ ಒಂದು ಗುಂಟೆ ಜಾಗಕ್ಕಾಗಿ ತಂದೆಯನ್ನೇ ಕೊಲೆ ಮಾಡಿದ್ದಾನೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಮಾಳಪ್ಪ ಹಳ್ಳೂರ (65) ಮಗನಿಂದಲೇ ಕೊಲೆಯಾದ ತಂದೆ. ತುಕ್ಕಪ್ಪ ಕೊಲೆ ಆರೋಪಿ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಕೆರೆ ಹತ್ತಿರ ನಿನ್ನೆ ತಡರಾತ್ರಿ ಈ ಕೊಲೆ ನಡೆದಿದೆ.
ಶೆಡ್ ಮನೆಯಲ್ಲಿ ತಂದೆ ಮಲಗಿದ್ದ ವೇಳೆ ಆತನ ತಲೆಗೆ ಮಗ ಕಟ್ಟಿಗೆ ಚೌಕಟ್ಟಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ತಡರಾತ್ರಿ ಎರಡೂವರೆ ಸುಮಾರಿಗೆ ಈ ಹತ್ಯೆ ನಡೆದಿದೆ. ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.