ನ್ಯೂಸ್

ನೀರಿನ ಸಮಸ್ಯೆ ಬಗೆಹರಿಸಿ

Webdesk - Manjunatha B

ಈ ಬಾರಿ ಬೇಸಿಗೆಯ ಪ್ರಾರಂಭದಲ್ಲೇ ರಾಜ್ಯದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಮೇರೆ ಮೀರಿದೆ. ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದೇ, ಎಲ್ಲೆಡೆ ಜಲಮೂಲಗಳು ಒಣಗಿವೆ. ಅಂತರ್ಜಲ ಕೂಡ ಪಾತಾಳಕ್ಕಿಳಿದು, ಬಹಳಷ್ಟು ಕೊಳವೆಬಾವಿಗಳು ಬತ್ತಿಹೋಗಿವೆ. ತತ್ಪರಿಣಾಮ, ರಾಜಧಾನಿ ಮಾತ್ರವಲ್ಲದೆ ರಾಜ್ಯದ ಎಲ್ಲ ನಗರ-ಗ್ರಾಮೀಣ ಪ್ರದೇಶಗಳಲ್ಲಿಯೂ ಜನ-ಜಾನುವಾರುಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಸ್ಥಳೀಯ ಆಡಳಿತಗಳು ಟ್ಯಾಂಕರ್​ಗಳ ಮೂಲಕ ಉಚಿತವಾಗಿ ನೀರನ್ನು ಪೂರೈಸುವ ಕಾರ್ಯವನ್ನು ಕೆಲವೆಡೆ ಆರಂಭಿಸಿವೆ. ಆದರೆ ಸಮಸ್ಯೆಯ ಅಗಾಧತೆಯ ಎದುರು ಈ ಪ್ರಯತ್ನ ‘ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಆಗಿದೆ. ಕೆಲ ಸಾರ್ವಜನಿಕರು ತಮ್ಮ ಸ್ವಂತ ಹಣದಲ್ಲಿ ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತಿದ್ದು, ಅಲ್ಲಿಯೂ ಹೆಚ್ಚಿನ ಹಣ ವಸೂಲಿ ಮಾಡುವ ಮೂಲಕ ಅವರನ್ನು ಶೋಷಿಸುವ ಕೆಲಸದಲ್ಲಿ ಕೆಲವು ಟ್ಯಾಂಕರ್ ಮಾಲೀಕರು ನಿರತರಾಗಿದ್ದಾರೆ. ಈ ಸಮಸ್ಯೆ ಪರಿಹರಿಸುವುದಕ್ಕೋಸ್ಕರ ಸರ್ಕಾರ ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಲು ಮುಂದಾಗಿದೆ. ಇದನ್ನು ಉಲ್ಲಂಘಿಸುವ ಟ್ಯಾಂಕರ್ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅಧಿಕಾರಸ್ಥರು ಎಚ್ಚರಿಕೆ ನೀಡಿದ್ದಾರೆ. ಆದರೆ ಇದು ಜನರ ಸಮಸ್ಯೆಯನ್ನು ಬಗೆಹರಿಸುವುದಕ್ಕಿಂತ ಮತ್ತಷ್ಟು ಜಟಿಲಗೊಳಿಸುವ ಸಾಧ್ಯತೆಯೇ ಹೆಚ್ಚು. ಇಂತಹ ತೋರಿಕೆಯ ಕ್ರಮಗಳು ಮತ್ತು ಹುಸಿ ಕಾಳಜಿಯ ಹೇಳಿಕೆಗಳಿಂದ ಏನೂ ಪ್ರಯೋಜನವಾಗದು.

ಈ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಅತಿ ಹೆಚ್ಚು ಜವಾಬ್ದಾರಿ ಇದೆ. ಅವರು ತಮ್ಮ ವ್ಯಾಪ್ತಿಯಲ್ಲಿರುವ ಸಕ್ರಿಯ ಖಾಸಗಿ ಕೊಳವೆ ಬಾವಿಗಳ ಮಾಲೀಕರ ಜತೆ ಮಾತನಾಡಿ, ಒಪ್ಪಂದ ಮಾಡಿಕೊಳ್ಳಬೇಕು. ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ಅಭಾವವಿರುವ ಪ್ರದೇಶಗಳಿಗೆ ಟ್ಯಾಂಕರ್​ಗಳ ಮೂಲಕ ಪೂರೈಸಬೇಕು. ಇದಕ್ಕೆ ತಗಲುವ ವೆಚ್ಚವನ್ನು, ಇಂತಹ ಸಂದರ್ಭಗಳಿಗಾಗಿಯೇ ಮೀಸಲಿಟ್ಟಿರುವ ‘ಸಂಕಷ್ಟ ನಿಧಿ’ಯಿಂದ ಕೂಡಲೇ ಭರಿಸಬೇಕು. ಇಲ್ಲದಿದ್ದರೆ ಟ್ಯಾಂಕರ್​ಗಳು ಸಿಗುವುದೂ ದುಸ್ತರವಾಗುತ್ತದೆ. ಮನೆಗಳಿಗೆ ನೀರು ಪೂರೈಸುವುದು ಮಾತ್ರವಲ್ಲ, ಇದು ಪರೀಕ್ಷಾ ಸಮಯವಾದ್ದರಿಂದ ಶಾಲಾ-ಕಾಲೇಜು, ಹಾಸ್ಟೆಲ್​ಗಳಿಗೂ ನೀರಿನ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ಜಾನುವಾರುಗಳನ್ನು ಕೂಡ ನಿರ್ಲಕ್ಷಿಸಬಾರದು. ಸ್ಥಳೀಯ ಮಟ್ಟದಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಬೇಕು. ಅದಕ್ಕೆ ಫೋನ್ ಕರೆ ಮಾಡಿದ ಜನರ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಮುಂದಾಗಬೇಕು. ಆಗ ಮಾತ್ರ ಇನ್ನು ಮೂರು ತಿಂಗಳ ಕಾಲ ಜನರ ಬವಣೆಯನ್ನು ಸ್ವಲ್ಪವಾದರೂ ಸಹನೀಯಗೊಳಿಸಲು ಸಾಧ್ಯ.

ಇದರ ಜತೆಗೆ, ಇಂತಹ ಸಮಸ್ಯಾತ್ಮಕ ಸನ್ನಿವೇಶದಲ್ಲಿ ಕೂಡ ಕೆಲವರು ಸಿಕ್ಕ ನೀರನ್ನು ಉದ್ಯಾನಗಳಿಗೆ ಹರಿಸಲು ಮತ್ತು ವಾಹನಗಳನ್ನು ತೊಳೆಯಲು ಬಳಸಿಕೊಳ್ಳುವ ದೃಶ್ಯಗಳೂ ಅಲ್ಲಲ್ಲಿ ಕಾಣಸಿಗುತ್ತಿರುವುದು ದುರದೃಷ್ಟಕರ. ಸಾರ್ವಜನಿಕರು ನೀರನ್ನು ಹಿತಮಿತವಾಗಿ ಬಳಸುವ ಮೂಲಕ ಪ್ರಜ್ಞಾವಂತಿಕೆ ಮೆರೆಯಬೇಕು.