| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ನಗರೀಕರಣ ವ್ಯಾಪಕವಾಗುತ್ತಿರುವಂತೆ ಸರ್ಕಾರಕ್ಕೆ ಘನತ್ಯಾಜ್ಯ ಸಮಸ್ಯೆ ದಿನದಿಂದ ದಿನಕ್ಕೆ ಸವಾಲಾಗುತ್ತಿದೆ. ಮುಂದಿನ 6-7 ವರ್ಷದಲ್ಲಿ ಘನತ್ಯಾಜ್ಯ ಉತ್ಪಾದನೆ ದ್ವಿಗುಣವಾಗುವ ಸಾಧ್ಯತೆಯನ್ನು ಅಂದಾಜಿಸಿದ್ದು, ಈ ಸಮಸ್ಯೆ ಎದುರಿಸಲು ಈಗಲೆ ಸರ್ವಸನ್ನದ್ಧವಾಗಬೇಕಾದ ಅನಿವಾರ್ಯತೆ ಇದೆ.
ಅಂದಹಾಗೆ, ಘನತ್ಯಾಜ್ಯ ನಿರ್ವಹಣೆಗೆ ಕೆಲವು ವರ್ಷಗಳಿಂದ ವಿವಿಧ ರೀತಿಯ ಪ್ರಯತ್ನ ನಡೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನ ಸಾಕಾಗುತ್ತಿಲ್ಲ ಎಂಬ ಸಂಗತಿಯನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ತನ್ನ ವರದಿಯಲ್ಲಿ ಹೊರಹಾಕಿದೆ.
ತ್ವರಿತ ನಗರೀಕರಣ, ಜನಸಂಖ್ಯಾ ಸ್ಪೋಟ, ಜೀವನಶೈಲಿಯ ಬದಲಾವಣೆ ಮತ್ತು ಆಧುನೀಕರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಘನತ್ಯಾಜ್ಯ ಹೆಚ್ಚಾಗಿ ಉತ್ಪಾದನೆಯಾಗುತ್ತಿದೆ. ತ್ಯಾಜ್ಯದ ಸಂಸ್ಕರಣೆ, ಮರು ಬಳಕೆ ಅಸಮರ್ಪಕ ನಿರ್ವಹಣೆಯಿಂದಾಗಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇದೊಂದು ಎಚ್ಚರಿಕೆ ಬಹಿಸಬೇಕಾದ ಸಂಗತಿಯಾಗಿದೆ.
ರಾಜ್ಯದಲ್ಲಿ ಪ್ರತಿ ದಿನ 11,044 ಟನ್ ಘನತ್ಯಾಜ್ಯ ಉತ್ಪಾದನೆಗೊಳ್ಳುತ್ತಿದೆ. ಇದರಲ್ಲಿ ಶೇ.50-55 ಜೈವಿಕ ಅಥವಾ ಹಸಿ ತ್ಯಾಜ್ಯ, ಶೇ.30-35 ಒಣ ತ್ಯಾಜ್ಯ ಮತ್ತು ಶೇ.10-20 ಸಿ ಮತ್ತು ಡಿ ಹಾಗೂ ನಿರುಪಯುಕ್ತ ತ್ಯಾಜ್ಯಗಳನ್ನು ಒಳಗೊಂಡಿದೆ. 2030-31ರ ವೇಳೆಗೆ ಬೆಂಗಳೂರು ನಗರವೊಂದರಲ್ಲಿ ಪ್ರತಿದಿನ ಸುಮಾರು 13 ಸಾವಿರ ಟನ್ ಘನ ತ್ಯಾಜ್ಯ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂಬುದನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಂದಾಜಿಸಿದೆ. ಈ ಮೂಲಕ ಸರ್ಕಾರವನ್ನೂ ಎಚ್ಚರಿಸಿದೆ.
ಪ್ರಸ್ತುತ ರಾಜ್ಯದಲ್ಲಿ ಪ್ರತಿದಿನ 5,743 ಟನ್ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಬೆಂಗಳೂರೊಂದರಲ್ಲೇ ಪ್ರತಿ ದಿನ 2,399 ಟನ್ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರಿಂದ 218 ಟನ್ ಗೊಬ್ಬರದ ಉತ್ಪಾದನೆ ಸಾಧ್ಯವಾಗುತ್ತದೆ. ಅಲ್ಲದೆ, ಪ್ರತಿ ದಿನ 11 ಲಕ್ಷ ರೂ. ಆದಾಯವನ್ನೂ ನಿರೀಕ್ಷಿಸಬಹುದಾಗಿದೆ. ಬೆಂಗಳೂರನ್ನು ಹೊರತುಪಡಿಸಿ ಉಳಿದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿದಿನಕ್ಕೆ ಉತ್ಪಾದನೆಯಾಗುವ 3,344 ಟನ್ ಹಸಿ ತ್ಯಾಜ್ಯದಿಂದ 300 ಟನ್ ಗೊಬ್ಬರ ಉತ್ಪಾದಿಸಬಹುದಾಗಿದೆ. ಇದರಿಂದ ನಿತ್ಯ 15 ಲಕ್ಷ ರೂ. ಆದಾಯ ಗಳಿಸಲು ಅವಕಾಶವಿದೆ. ಪ್ರಸ್ತುತ ರಾಜ್ಯದಲ್ಲಿ ಉತ್ಪಾದನೆಯಾಗುವ ಶೇ.55 ಹಸಿ ತ್ಯಾಜ್ಯವನ್ನು ಮಾತ್ರ ಗೊಬ್ಬರವಾಗಿಸುತ್ತಿದ್ದು, ಇನ್ನಷ್ಟು ಪ್ರಗತಿ ಸಾಧಿಸಲು ಅವಕಾಶ ಇರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಒಣ ತ್ಯಾಜ್ಯ ನಿರ್ವಹಣೆ ವಿಚಾರಕ್ಕೆ ಬಂದರೆ ಬೆಂಗಳೂರಿನಲ್ಲಿ ಪ್ರತಿ ದಿನ 1,167 ಟನ್ ಒಣ ತ್ಯಾಜ್ಯ ಉತ್ಪಾದಿಸುತ್ತಿದ್ದು, ಇದರಲ್ಲಿ 612 ಟನ್ ಮರು ಬಳಕೆ ಮಾಡಲಾಗುತ್ತಿದೆ. 3.3 ಟನ್ ಒಣ ತ್ಯಾಜ್ಯವನ್ನು ಸಿಮೆಂಟ್ ತಯಾರಿಕಾ ಘಟಕಗಳ ಬಳಕೆಗೆ ನೀಡಲಾಗುತ್ತಿದೆ. ಉಳಿಕೆಯಾಗುವ 551.7 ಟನ್ ಒಣ ತ್ಯಾಜ್ಯದ ಶೇ.47.26 ತ್ಯಾಜ್ಯವನ್ನು ಭೂ ಭರ್ತಿ ಮಾಡಲಾಗುತ್ತಿದೆ.
ಒಟ್ಟಾರೆ ರಾಜ್ಯದಲ್ಲಿ ಪ್ರತಿದಿನ 3,237 ಟನ್ ಒಣ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ 1,114.8 ಟನ್ ಮರು ಬಳಕೆಯಾದರೆ 215 ಟನ್ ರೆಫ್ಯೂಸ್ ಡಿರೈವ್ಡ್ ಫ್ಯೂಯಲ್ (ಆರ್ಡಿಎಫ್) ಆಗಿ ಪರಿವರ್ತಿತವಾಗುತ್ತಿದ್ದು, 118 ಟನ್ ಆರ್ಡಿಎಫ್ಗಳನ್ನು ಸಿಮೆಂಟ್ ತಯಾರಿಕಾ ಘಟಕಗಳಲ್ಲಿ ಉರುವಲಾಗಿ ಬಳಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಒಣ ತ್ಯಾಜ್ಯದಲ್ಲಿ ಶೇ.44.7 ಮಾತ್ರ ಮರು ಬಳಕೆ ಮಾಡಲಾಗುತ್ತಿದ್ದು, ಉಳಿದ 1790 ಟನ್ ಭೂ ಭರ್ತಿ ಮಾಡಲಾಗುತ್ತಿದೆ. ಆರ್ಡಿಎಫ್ ಹೆಚ್ಚೆಚ್ಚು ಬಳಕೆಯಿಂದ ನಗರ ಸ್ಥಳೀಯ ಸಂಸ್ಥೆಗೆ ಹೆಚ್ಚಿನ ಆದಾಯವನ್ನೂ ಮಾಡಿಕೊಳ್ಳಲು ಸಾಧ್ಯವಿದೆ. ಹಾಗೆಯೇ, ಬೆಂಗಳೂರು ಮಹಾ ನಗರ ಪಾಲಿಕೆ ತ್ಯಾಜ್ಯದಿಂದ ಇಂಧನ ಎನ್ನುವ ಹೆಸರಿನಲ್ಲಿ ಅನೇಕ ಪ್ರಮುಖ ಯೋಜನೆ ಪ್ರಸ್ತಾಪಿಸಿದ್ದರೂ ಇವು ಬಹುತೇಕ ಆರಂಭಿಕ ಹಂತದಲ್ಲಿವೆ.
ಮರುಬಳಕೆಯಲ್ಲಿ ಯಾರು ಹಿಂದೆ?: ಬೆಂಗಳೂರು ನಗರ, ಮೈಸೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಮತ್ತು ಕಲಬುರಗಿಯಂತಹ ಜಿಲ್ಲೆಗಳು ಪ್ರತಿ ದಿನ 40 ಟನ್ ಒಣ ತ್ಯಾಜ್ಯವನ್ನು ಮರು ಬಳಕೆ ಮಾಡುತ್ತಿವೆ. ಬೆಂಗಳೂರು ಗ್ರಾಮಾಂತರ, ಧಾರವಾಡ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ರಾಯಚೂರು ಮತ್ತು ಕೊಪ್ಪಳದಂತಹ ಜಿಲ್ಲೆಗಳು ಕಡಿಮೆ ಪ್ರಮಾಣದಲ್ಲಿ ಒಣ ತ್ಯಾಜ್ಯವನ್ನು ಮರು ಬಳಕೆ ಮಾಡುತ್ತಿವೆ.