More

    ಸಲಿಂಗ ಕಾಮಕ್ಕಾಗಿ ಹತ್ಯೆ: ಮರ್ಯಾದೆಗೆ ಅಂಜಿ ಸಂಗಾತಿಯನ್ನೇ ಕೊಂದ!

    ಬೆಂಗಳೂರು: ನಾಯಂಡಹಳ್ಳಿ ಮನೆಯಲ್ಲಿ ನಡೆದಿದ್ದ ಜಾಹೀರಾತು ಕಂಪನಿ ಮಾಲೀಕ ಲಿಯಾಖತ್ ಅಲಿ ಖಾನ್ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸಲಿಂಗ ಕಾಮ ಸಂಬಂಧ ಕಾರಣಕ್ಕೆ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.

    ಚಂದ್ರಾಲೇಔಟ್ 1ನೇ ಹಂತದ ನಿವಾಸಿ ಲಿಯಾಖತ್ ಅಲಿ ಖಾನ್ (46) ಕೊಲೆಯಾದ ದುರ್ದೈವಿ. ಹತ್ಯೆ ಬಳಿಕ ಆತ್ಮಹತ್ಯೆಗೆ ಯತ್ನಿಸಿ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಗೋರಿಪಾಳ್ಯದ ಇಲಿಯಾಸ್ (26) ಎಂಬಾತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಲಿಂಗಕಾಮ ವಿಚಾರ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗೋರಿಪಾಳ್ಯದಲ್ಲಿ ಇಲಿಯಾಸ್, ಪಾಲಕರ ಜತೆ ನೆಲೆಸಿದ್ದ. ಗಂಗೊಂಡನಹಳ್ಳಿಯಲ್ಲಿ ‘ರಾಯಲ್ ಕಮ್ಯುನಿಕೇಷನ್’ ಜಾಹೀರಾತು ಪ್ರಿಂಟಿಗ್ ಪ್ರೆಸ್ ನಡೆಸುತ್ತಿದ್ದ ಲಿಯಾಖತ್, 2 ಮದುವೆ ಆಗಿದ್ದ. ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. 2022ರ ಫೆಬ್ರವರಿಯಲ್ಲಿ ಮತ್ತೊಂದು ವಿವಾಹವಾಗಿದ್ದ.

    ಇದನ್ನೂ ಓದಿ: ಬಾರ್‌ಗೆ ಬಂದ ಕಡಲಾಮೆ!; ಗ್ರಾಹಕರ ಟೇಬಲ್​ ಕೆಳಗೇ ಇಟ್ಟ ಮೊಟ್ಟೆಗಳ ಸಂರಕ್ಷಣೆ

    ಹೀಗಿದ್ದರೂ ಲಿಯಾಖತ್ ತನ್ನ ಕಿರಿಯ ವಯಸ್ಸಿನ 26 ವರ್ಷದ ಇಲಿಯಾಸ್ ಜತೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಹೊಂದಿದ್ದ. ಕರೊನಾ ಲಾಕ್‌ಡೌನ್ ಸಮಯದಲ್ಲಿ ಲಿಯಾಖತ್ ಮತ್ತು ಇಲಿಯಾಸ್ ನಡುವೆ ಪರಿಚಯವಾಗಿ ಸ್ನೇಹ ಬೆಳೆದಿತ್ತು. ನಾಯಂಡಹಳ್ಳಿಯ ಮೆಟ್ರೋ ಲೇಔಟ್‌ನಲ್ಲಿ ಲಿಯಾಖತ್‌ಗೆ ಸೇರಿದ ಹಳೆಯ ಮನೆಯಲ್ಲಿ ಇಬ್ಬರು ಭೇಟಿ ಆಗುತ್ತಿದ್ದರು.

    ಕೆಲ ತಿಂಗಳ ಹಿಂದೆ ಆರೋಪಿ ಇಲಿಯಾಸ್‌ಗೆ ಮದುವೆ ನಿಶ್ಚಿತಾರ್ಥಕ್ಕೆ ಪಾಲಕರು ಮುಂದಾಗಿದ್ದರು. ಲಿಯಾಖತ್ ಜೊತೆಗೆ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ನಿಶ್ಚಿತಾರ್ಥ ರದ್ದು ಮಾಡಿಕೊಂಡಿದ್ದ. ಮತ್ತೆ ಇಲಿಯಾಸ್‌ಗೆ ಪಾಲಕರು ಮದುವೆಗೆ ಹುಡುಗಿ ಹುಡುಕುತ್ತಿದ್ದರು.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಲಿಯಾಖತ್ ಜೊತೆಗಿನ ಸಂಬಂಧದ ಬಗ್ಗೆ ಮನೆಯವರಿಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂಬ ಆತಂಕದಿಂದ ಇಲಿಯಾಸ್ ಭಯಗೊಂಡಿದ್ದ. ಫೆ.27ರ ರಾತ್ರಿ ಎಂದಿನಂತೆ ಇಲಿಯಾಸ್ ಮತ್ತು ಲಿಯಾಕತ್ ಎಂದಿನಂತೆ ನಾಯಂಡಹಳ್ಳಿ ಮನೆಯಲ್ಲಿ ಭೇಟಿ ಆಗಿದ್ದರು.

    ಆಗ ಇಲಿಯಾಸ್, ತನ್ನ ಭವಿಷ್ಯದ ಬದುಕಿನ ಬಗ್ಗೆ ಪ್ರಸ್ತಾಪಿಸಿ ಸಂಬಂಧವನ್ನು ಮುರಿದುಕೊಳ್ಳುವಂತೆ ಲಿಯಾಖತ್‌ಗೆ ಹೇಳಿದ್ದ. ಅಲ್ಲದೆ ಸಲಿಂಗಕಾಮ ವಿಚಾರ ಬಹಿರಂಗಪಡಿಸದಂತೆ ಕೂಡ ಕೋರಿದ್ದ. ಆದರೆ ಈ ಮಾತನ್ನು ಲಿಯಾಖತ್, ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೊನೆಗೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ಹಂತದಲ್ಲಿ ಕೆರಳಿದ ಇಲಿಯಾಸ್, ತನ್ನ ಸ್ನೇಹಿತ ಲಿಯಾಖತ್ ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದ. ಬಳಿಕ ಲಿಯಾಖತ್ 2ನೇ ಪತ್ನಿಗೆ ಕೊಡಲು ತಂದಿದ್ದ ಕತ್ತರಿಯಿಂದ ಆತನ ಕುತ್ತಿಗೆ ಇರಿದು ಇಲಿಯಾಸ್ ಪರಾರಿಯಾಗಿದ್ದ.

    ಹತ್ಯೆ ಬಳಿಕ ಮನೆಗೆ ತೆರಳಿದ ಇಲಿಯಾಸ್, ಬಂಧನ ಭೀತಿಯಿಂದ ಪಾಲಕರ ಥೈರಾಯ್ಡ್​ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ಇಲಿಯಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts