ಪ್ರವಾದಿ(ಸ) ಮಹಮ್ಮದ್ ಪ್ರಸ್ತಾಪಿಸಿದ ವಿಚಾರವನ್ನು ಅಬೂ ಸಈದ್ ಎಂಬ ಸಹಚರರು ಮೆಲುಕು ಹಾಕುವುದು ಸ್ವಾರಸ್ಯಕರವಾಗಿದೆ. ‘ಸಮಾಜದ ಹಿತದೃಷ್ಟಿಯಿಂದ ಚಿಂತನಾರ್ಹವಾಗಿದೆ.ಒಬ್ಬನು ಹಸಿದಿರುವ ಮತ್ತೊಬ್ಬ ಸತ್ಯ ವಿಶ್ವಾಸಿಗೆ ಉಣ ಬಡಿಸಿದರೆ ದೇವರು ಪುನರುತ್ಥಾನದ ಸಂದರ್ಭದಲ್ಲಿ ಅವನಿಗೆ ಸ್ವರ್ಗದ ಆಹಾರವನ್ನು ಉಣಿಸುವನು. ಬಾಯಾರಿಕೆಯಿಂದ ನರಳುತ್ತಿರುವವನಿಗೆ ನೀರು ಕುಡಿಸಿದರೆ ಅಲ್ಲಾಹನು ಪುನರುತ್ಥಾನದ ದಿನ ಅವನಿಗೆ ಮುದ್ರೆ ಹಾಕಿರುವ ಶ್ರೇಷ್ಠಮಟ್ಟದ ಪಾನೀಯವನ್ನು ಕುಡಿಸುವನು. ಧರಿಸಲು ಬಟ್ಟೆ ಇಲ್ಲದವನಿಗೆ ಬಟ್ಟೆ ಉಡಿಸಿದರೆ ಅಲ್ಲಾಹನು ಪುನರುತ್ಥಾನದ ದಿನ ಅವನಿಗೆ ಸ್ವರ್ಗದ ಉಡುಪನ್ನು ಉಡಿಸುವನು’ ಎಂದು.
ಸಹಾಯಕ್ಕೆ ಅರ್ಹನಾದ ಬಡವ ಯಾರು ಎಂಬ ಪ್ರಶ್ನೆಗೆ ಪ್ರವಾದಿ(ಸ) ಹೇಳಿದರು. ಭಿಕ್ಷುಕನಾಗಿ ಸಮಾಜದ ಮುಂದೆ ಬಂದು ಒಂದೆರಡು ತುತ್ತು ಅನ್ನ ಇಲ್ಲವೇ ಒಂದೆರಡು ಖರ್ಜೂರಗಳನ್ನು ಬೇಡಿಕೊಂಡು ಹೋಗುವವನು ನಿಜವಾದ ಮಿಸ್ಕೀನ್. (ಸಹಾಯಕ್ಕೆ ಯೋಗ್ಯನಾದ ಬಡವ) ಆತ ತನ್ನ ಸ್ವಾಭಿಮಾನ ಹಾಗೂ ಸಂಕೋಚದಿಂದಾಗಿ ಜನತೆಯ ಎದುರು ಕೈ ಚಾಚುವುದಿಲ್ಲ. ಆತನಿಗೇನಾದರೂ ಕೊಡೋಣವೆಂದರೆ ಜನರಿಗೆ ಆತನ ನಿಜ ಸ್ಥಿತಿಯೂ ಗೊತ್ತಾಗಿರುವುದಿಲ್ಲ.ಮತ್ತೊಂದು ಸಂದರ್ಭದಲ್ಲಿ ಅಬೂ ಹುರೈರಾ(ರ) ಹೀಗೆ ಹೇಳುತ್ತಾರೆ: ಗುಲಾಮ ಹಾಗೂ ದಾಸಿಯರಿಗೆ ಉಣ್ಣಲು ಹಾಗೂ ಉಡಲು ನೀಡಬೇಕು. ಅವರಿಗೆ ಸಾಧ್ಯವಿರುವಷ್ಟು ಮಾತ್ರ ಕೆಲಸದ ಹೊರೆಯನ್ನು ಹೊರಿಸಬೇಕು.
ಸಲ್ಮಾನ್ ಪಾರ್ಸಿ(ರ) ರಾಜಪಾಲರಾಗಿದ್ದ ಕಾಲದಲ್ಲಿ ಅವರ ಹತ್ತಿರ ಬಂದ ಒಬ್ಬ ವ್ಯಕ್ತಿ ರಾಜ್ಯಪಾಲರೇ, ಸ್ವತಃ ಹಿಟ್ಟು ರುಬ್ಬುತ್ತಿರುವುದನ್ನು ನೋಡಿ, ‘ಇದೇನು ತಾವೇ ರುಬ್ಬುವ ಕಾರ್ಯ ಮಾಡುತ್ತಿದ್ದೀರಿ’ ಎಂದು ವಿಸ್ಮಯದಿಂದ ಕೇಳಿದ. ಆಗ ಸಲ್ಮಾನ್ ಪಾರ್ಸಿ(ರ), ‘ನಾನು ನನ್ನ ಸೇವಕನನ್ನು ಒಂದು ಕಾರ್ಯ ದ ನಿಮಿತ್ತ ಹೊರಗೆ ಕಳಿಸಿದ್ದೇನೆ. ಆತನಿಗೆ ಎರಡೆರಡು ಕೆಲಸಗಳ ಭಾರ ಹೊರಿಸುವುದು ನನಗೆ ಇಷ್ಟವಿಲ್ಲ’. ಎಂದರು. ರಾಜ್ಯಪಾಲರ ಮಾನವೀಯತೆಗೆ ಇದೊಂದು ಉತ್ತಮ ನಿದರ್ಶನವಾಗಿದೆ. ಜನರನ್ನು ಪ್ರಾಣಿಗಳಂತೆ ಕಾಣುತ್ತಿದ್ದ ಕಾಲದಲ್ಲಿ ಮಾನವೀಯತೆಯ ಬೆಳಕು ಅಲ್ಲಿ ಕಾಣುತಿತ್ತು.