ಬೆಂಗಳೂರು: ಟ್ವಿಟ್ಚರ್ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪ ಹೊತ್ತ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಮಾಜಿ ಕಾರ್ಯಕಾರಿ ನಿರ್ದೇಶಕ, ಲೇಖಕ ಆಕಾರ್ ಪಟೇಲ್ ಅವರ ಟ್ವಿಟರ್ ಖಾತೆಯನ್ನು ಟ್ವಿಟರ್ ರದ್ದು ಮಾಡಿದೆ.
ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಡಿಯೋವನ್ನು ಅಲ್ಲಿನ ಮಾಧ್ಯಮವೊಂದು ಟ್ವೀಟ್ ಮಾಡಿದೆ. ಇದನ್ನೂ ರಿಟ್ವೀಟ್ ಮಾಡಿದ್ದ ಆಕಾರ್ ಪಟೇಲ್, “ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಮತ್ತು ಮಹಿಳೆಯರಿಂದ ಭಾರತದಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯಬೇಕಿದೆ. ಇದರಿಂದಾಗಿ ಜಗತ್ತು ನಮ್ಮತ್ತ ಗಮನಿಸುತ್ತದೆ. ಪ್ರತಿಭಟನೆ ಒಂದು ಕರಕುಶಲ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮದ್ಯ ಅಕ್ರಮಕ್ಕೆ ಕುಮ್ಮಕ್ಕು!, ಟಾರ್ಗೆಟ್ ಮುಟ್ಟಲು ಅಬಕಾರಿ ವಾಮಮಾರ್ಗ ಆರೋಪ, ಜಿಲ್ಲೆಯಲ್ಲಿ ಅಕ್ರಮ ಮದ್ಯದ ಹೊಳೆ
ಇವರ ವಿರುದ್ಧ ಬೆಂಗಳೂರಿನ ಜೆಸಿ ನಗರ ಪೊಲೀಸರು ಇದೇ 5ರಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಲೇಖಕ ಆಕಾರ್ ಪಟೇಲ್ ಅವರ ಈ ಹೇಳಿಕೆಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕರೊನಾ ವೈರಸ್ ಹರಡುವ ಭೀತಿಯಿಂದಾಗಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಇಂಥ ಸಂದರ್ಭದಲ್ಲಿಯೂ ಅಮೆರಿಕ ಮಾದರಿಯಲ್ಲಿ ಭಾರತದಲ್ಲಿಯೂ ದಲಿತರು ಪ್ರತಿಭಟನೆ ಮಾಡುವಂತೆ ಹೇಳಿರುವುದು ಸರಿಯಲ್ಲ ಎಂದು ಹಲವರು ಕಿಡಿ ಕಾರಿದ್ದರು.
ಈ ಹಿಂದೆ ಕೂಡ ಆಕಾರ್ ಪಟೇಲ್ ಅನೇಕ ಸಂದರ್ಭದಲ್ಲಿ ಇದೇ ರೀತಿ ವಿವಾದಕ್ಕೆ ಸಿಲುಕಿದ್ದಾರೆ. ಅಯೋಧ್ಯೆ ವಿವಾದದ ಕುರಿತ ಸುಪ್ರೀಂಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖವಾಣಿ ಪತ್ರಿಕೆ ನ್ಯಾಷನಲ್ ಹೆರಾಲ್ಡ್ , ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಇವರು, 'ಅಯೋಧ್ಯೆಯ ತೀರ್ಪು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅನ್ನು ನೆನಪಿಸುತ್ತದೆ ಎಂದಿದ್ದರು. ಅಷ್ಟೇ ಅಲ್ಲದೇ ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ಬಯಸಿದ್ದನ್ನು ಭಾರತದ ಸುಪ್ರೀಂ ಕೋರ್ಟ್ ನೀಡಿದಂತಿದೆ ಎಂದಿದ್ದರು. (ಏಜೆನ್ಸೀಸ್)