ಬೆಂಗಳೂರು: ರಾಜ್ಯ ಸರ್ಕಾರವು ಪ್ರತಿ ವರ್ಷ ನ.1ರಂದು ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳ ಪ್ರವಾಹವೇ ಹರಿದುಬಂದಿದ್ದು, ಈವರೆಗೆ ಸುಮಾರು 18 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.
ಪ್ರತಿ ವರ್ಷದಂತೆ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದರ ಜತೆಗೆ, ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಗಳಿಗೆ ಪ್ರಕ್ರಿಯೆ ನಡೆಸುವಂತೆ ಸಾರ್ವಜನಿಕರಿಂದ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಿದ ಪರಿಣಾಮ ಅರ್ಜಿಗಳ ಪ್ರಮಾಣ ಹೆಚ್ಚಿದೆ. ಅರ್ಜಿ ಸಲ್ಲಿಕೆಗೆ ಇನ್ನೂ ಮೂರು ದಿನ ಬಾಕಿ ಇದ್ದು, 25 ಸಾವಿರ ದಾಟುವ ನಿರೀಕ್ಷೆಯಿದ್ದು, ಇದರಲ್ಲಿ ಕೇವಲ 66 ಸಾಧಕರನ್ನು ಆಯ್ಕೆ ಮಾಡುವುದು ಸಮಿತಿಗೆ ಸವಾಲಾಗಿ ಪರಿಣಮಿಸಿದೆ.
ಸೇವಾ ಸಿಂಧು ಮೂಲಕ ರಾಜ್ಯೋತ್ಸವ ಪ್ರಶಸ್ತಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅರ್ಹರು ಎಂದು ಭಾವಿಸುವವರು ಸರ್ಕಾರಕ್ಕೆ ಪ್ರತಿ ವರ್ಷ ಅರ್ಜಿ ಸಲ್ಲಿಸುತ್ತಾರೆ. ಇದರ ಜತೆಗೆ ವಿವಿಧ ಇಲಾಖೆಗಳ ಸಚಿವರು, ಶಾಸಕರು, ಸ್ಥಳೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರ ಮೂಲಕವೂ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇವುಗಳ ಜತೆಗೆ, ಆಯ್ಕೆ ಸಮಿತಿಯೂ ಎಲೆ ಮರೆ ಕಾಯಂತಿರುವ ಸಾಧಕರನ್ನು ಗುರುತಿಸುವ ಸಂಪ್ರದಾಯವೂ ಇದೆ. ಇವೆಲ್ಲದರ ಜತೆಗೆ ಇದೇ ಮೊದಲ ಬಾರಿಗೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವಕಾಶ ಮಾಡಿದ್ದಾರೆ.
ಸಚಿವರ ಒತ್ತಾಸೆ ಮೇರೆಗೆ ಈ ಬಾರಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಕೆಲವರಿಗೆ ತಾಂತ್ರಿಕ ತೊಂದರೆ ಕಾಣಿಸಿಕೊಂಡರೂ ಈ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿರುವುದು ಅಚ್ಚರಿಯ ಹಾಗೂ ಸಂತೋಷದ ವಿಚಾರ. ಇಷ್ಟು ಬೃಹತ್ ಸಾಧಕರ ನಡುವೆ 66 ಜನರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಇನ್ನೂ ಮೂರು ದಿನಗಳಿದ್ದು, ಒಟ್ಟು ಸಂಖ್ಯೆ 25 ಸಾವಿರ ದಾಟುವ ಅಂದಾಜಿದೆ.
| ಎಸ್. ರಂಗಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ