ನ್ಯೂಸ್

ಮನೆ ಬಳಿ ಬಂದು ಚಪ್ಪಲಿಯನ್ನು ಕದ್ದೊಯ್ದ ಹಾವು! ವೈರಲ್​ ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋ ವೈರಲ್​ ಆಗುತ್ತಲೇ ಇರುತ್ತದೆ. ಅದರಲ್ಲೂ ಹಾವಿನ ವಿಡಿಯೋಗಳು ಅಂದರೆ ನೋಡುಗರನ್ನು ಬಹುಬೇಗ ಸೆಳೆದುಬಿಡುತ್ತವೆ ಮತ್ತು ಕ್ಷಣಾರ್ಧದಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆ. ಇದೀಗ ಅಂಥದ್ದೇ ವಿಡಿಯೋವೊಂದು ವೈರಲ್​ ಆಗಿದೆ.

ಭಾರತೀಯ ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್​​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ರಸ್ತೆಯೊಂದರ ಪಕ್ಕದಿಂದ ಹೊರಬರುವ ಹಾವೊಂದು ಮನೆಯನ್ನು ಪ್ರವೇಶಿಸುವ ಪ್ರಯತ್ನ ಮಾಡುತ್ತದೆ. ಈ ವೇಳೆ ಮಹಿಳೆಯೊಬ್ಬಳು ಕೂಗಿ ಕೊಳ್ಳುವುದು ವಿಡಿಯೋದಲ್ಲಿ ಹಿನ್ನೆಲೆ ಧ್ವನಿಯಲ್ಲಿ ಕೇಳುತ್ತದೆ. ಆಕೆ ಕೂಗಿಕೊಂಡ ಬೆನ್ನಲ್ಲೇ ಗಾಬರಿಗೊಳ್ಳುವ ಹಾವು ಚಪ್ಪಲಿಯನ್ನು ಕಚ್ಚಿಕೊಂಡು ಅಲ್ಲಿಂದ ಪರಾರಿಯಾಗುತ್ತದೆ,

ಈ ವಿಡಿಯೋ ಎಲ್ಲಿಯದ್ದು ಎಂಬುದು ತಿಳಿದುಬಂದಿಲ್ಲ. ಸದ್ಯ ವಿಡಿಯೋ ವೈರಲ್​ ಆಗಿದೆ. ಹಾವಿಗೆ ಕಾಲುಗಳು ಇಲ್ಲದಿದ್ದರೂ ಈ ಚಪ್ಪಲಿಯನ್ನು ತೆಗೆದುಕೊಂಡು ಹೋಗಿ ಏನು ಮಾಡುತ್ತದೆ ಎಂಬುದೇ ಕುತೂಹಲಕಾರಿ ಸಂಗತಿ ಎಂದು ಪರ್ವೀನ್​ ಕಾಸ್ವಾನ್​ ಅವರು ವಿಡಿಯೋಗೆ ಅಡಿಬರಹ ನೀಡಿದ್ದಾರೆ.

ಇದುವರೆಗೂ ವಿಡಿಯೋ 1 ಲಕ್ಷದ 89 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಐದು ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ಅಲ್ಲದೆ, 400 ಕ್ಕೂ ಹೆಚ್ಚು ಜನ ವಿಡಿಯೋ ಪ್ರತಿಕ್ರಿಯಿಸುವ ಮೂಲಕ ಹುಬ್ಬೇರಿಸಿದ್ದಾರೆ. (ಏಜೆನ್ಸೀಸ್​)