ಜೈಪುರ: ಮೊದಲ ಬಾರಿ ಹಾವು ಕಡಿದಾಗ ಚಿಕಿತ್ಸೆ ಪಡೆದು ಗುಣವಾಗಿದ್ದ ವ್ಯಕ್ತಿಯೊಬ್ಬ ಮತ್ತೆ ಹಾವು ಕಡಿತದಿಂದಲೇ ದುರಂತ ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಪೊಖ್ರಾನ್ನಲ್ಲಿ ನಡೆದಿದೆ.
40 ವರ್ಷದ ಜಾಸಬ್ ಖಾನ್ ಮೃತ ದುರ್ದೈವಿ. ಜಾಸಬ್ ಅವರು ಜೂನ್ 20ರಂದು ಹಾವು ಕಡಿತಕ್ಕೆ ಒಳಗಾಗಿದ್ದರು. ಪೊಖ್ರಾನ್ನಲ್ಲಿರುವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ನಾಲ್ಕು ದಿನಗಳ ಬಳಿಕ ಗುಣವಾಗಿದ್ದರು. ಆದರೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಮರು ದಿನ (ಜೂನ್ 26) ಮತ್ತೆ ಜಾಸಬ್ಗೆ ಹಾವು ಕಡಿದಿದೆ. ಜೋಧ್ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೇ ಜಾಸಬ್ ಮೃತಪಟ್ಟಿದ್ದಾರೆ.
ಜಾಸಬ್ ಅವರು ಜೋಧಪುರ್ ಜಿಲ್ಲೆಯ ಮೆಹ್ರಾಂಗಢ ಗ್ರಾಮದ ನಿವಾಸಿಯಾಗಿದ್ದರು. ಎರಡೂ ಬಾರಿಯೂ ಜಾಸಬ್ ಅವರಿಗೆ ಬಂದಿ ಎಂದು ಕರೆಯಲ್ಪಡುವ ಮಂಡಲದ ಹಾವಿನ ಉಪ ಜಾತಿಯ ಹಾವು ಕಚ್ಚಿದೆ ಎಂದು ತಿಳಿದುಬಂದಿದೆ. ಈ ಬಂದಿ ಹಾವು ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಈ ದುರಂತ ಮತ್ತು ವಿಲಕ್ಷಣ ಘಟನೆಯನ್ನು ಇದೀಗ ಭನಿಯಾನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೂನ್ 20ರಂದು ಹಾವು, ಜಾಸಬ್ ಅವರ ಪಾದಕ್ಕೆ ಕಚ್ಚಿತು. ಬಳಿಕ ಜಾಸಬ್ ಪೊಖ್ರಾನ್ನಲ್ಲಿರುವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಜೂನ್ 25ರಂದು ಮನೆಗೆ ಮರಳಿದ್ದರು. ಆದರೆ, ಮಾರನೇ ದಿನ ಅಂದರೆ ಜೂನ್ 26ರಂದು ಮತ್ತೊಂದು ಕಾಲಿಗೆ ಹಾವು ಕಚ್ಚಿತು.
ಮೊದಲ ಬಾರಿಯ ಕಡಿತದಿಂದ ಗುಣವಾಗುತ್ತಿರುವ ಸಮಯದಲ್ಲೇ ಮತ್ತೆ ಹಾವು ಕಡಿದಿದ್ದರಿಂದ ಎರಡನೇ ಬಾರಿ ಅವರನ್ನು ಉಳಿಸಿಕೊಳ್ಳಲೂ ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂಗಳಿಂದ ಸರಕು ಖರೀದಿಸದಂತೆ ಮುಸ್ಲಿಂ ವ್ಯಕ್ತಿಯ ಭಾಷಣ; ವಿಡಿಯೋ ಅಸಲಿಯತ್ತನ್ನು ಬಯಲು ಮಾಡಿದ ಪೊಲೀಸರು
ಜಾಸಬ್ ಅವರು ತಾಯಿ, ಪತ್ನಿ, ನಾಲ್ವರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗುವನ್ನು ಅಗಲಿದ್ದಾರೆ. ಜಸಾಬ್ ಸಾವಿಗೆ ಕಾರಣವಾದ ಹಾವನ್ನು ಆತನ ಕುಟುಂಬಸ್ಥರು ಹೊಡೆದು ಕೊಂದು ಹಾಕಿದ್ದಾರೆ. (ಏಜೆನ್ಸೀಸ್)