ಭುವನೇಶ್ವರ್: ಒಡಿಶಾದ ಬೌಧ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಒಂದೇ ಕುಟುಂಬದ ನಾಲ್ವರಿಗೆ ಹಾವು ಕಚ್ಚಿದ್ದು, ಮೂವರು ಸಹೋದರಿಯರು ಮೃತಪಟ್ಟಿದ್ದಾರೆ. ತಂದೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಮೂವರು ಸಹೋದರಿಯರನ್ನು ಸುಧೀರೇಖಾ (13), ಶುಭರೇಖಾ ಮಲಿಕ್ (12) ಮತ್ತು ಸೌರಭಿ ಮಲಿಕ್ (3) ಎಂದು ಗುರುತಿಸಲಾಗಿದೆ. ಭಾನುವಾರ (ಸೆ.08) ರಾತ್ರಿ ಈ ದಾರುಣ ಘಟನೆ ನಡೆದಿದೆ. ಟಿಕಾರಪಾಡು ಪಂಚಾಯತಿ ವ್ಯಾಪ್ತಿಯ ಚರಿಯಪಲಿ ಗ್ರಾಮದ ನಿವಾಸಿಯಾಗಿರುವ ಸುರೇಂದ್ರ ಮಲಿಕ್, ಕುಟುಂಬದೊಂದಿಗೆ ಭಾನುವಾರ ರಾತ್ರಿ ಮಲಗಿದ್ದರು. ಸ್ವಲ್ಪ ಸಮಯದ ಬಳಿಕ ಹೆಣ್ಣು ಮಕ್ಕಳ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಡಲು ಆರಂಭಿಸಿತು. ಉಸಿರಾಡಲು ಕಷ್ಟಪಡುತ್ತಿರುವುದನ್ನು ಕಂಡು ಮನೆಯವರೆಲ್ಲ ಎಚ್ಚರಗೊಂಡರು.
ಇದೇ ಸಂದರ್ಭದಲ್ಲಿ ಸಮೀಪದಲ್ಲೇ ಹಾವೊಂದು ಹರಿದಾಡುತ್ತಿರುವುದನ್ನು ಸುರೇಂದ್ರನು ಗಮನಿಸಿ, ಸಹಾಯಕ್ಕಾಗಿ ತನ್ನ ಹೆಂಡತಿಯನ್ನು ಕರೆದನು. ಕೂಡಲೇ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೂವರು ಸಹೋದರಿಯರು ಆಸ್ಪತ್ರೆಯಲ್ಲಿ ಮೃತಪಟ್ಟರು. ಸುರೇಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ಬುರ್ಲಾದ VIMSAR ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಮೂವರು ಸಹೋದರಿಯರಿಗೆ ಕ್ರೈಟ್ ಹಾವು (ಕಟ್ಟು ಹಾವು) ಕಚ್ಚಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಒಡಿಶಾದಲ್ಲಿ ಪ್ರತಿ ವರ್ಷ 2500 ರಿಂದ 6000 ಜನರು ಹಾವುಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಅವರಲ್ಲಿ 400 ರಿಂದ 900 ಮಂದಿ ಪ್ರತಿ ವರ್ಷ ಸಾಯುತ್ತಾರೆ. 2023-24ರಲ್ಲಿ ಹಾವು ಕಡಿತದಿಂದ ಕನಿಷ್ಠ 1011 ಜನರು ಮೃತಪಟ್ಟಿದ್ದಾರೆ. ಈ ವರ್ಷವೂ ಹಾವು ಕಡಿತದಿಂದ 240 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾವು ಕಡಿತಕ್ಕೆ ಒಳಗಾದವರ ಕುಟುಂಬಗಳಿಗೆ ಒಡಿಶಾ ಸರ್ಕಾರ 4 ಲಕ್ಷ ರೂ. ನೆರವು ನೀಡುತ್ತಾ ಬರುತ್ತಿದೆ.
ಸೈಲೆಂಟ್ ಕಿಲ್ಲರ್ ಕಟ್ಟು ಹಾವು
ಅಂದಹಾಗೆ ಕ್ರೈಟ್ ಹಾವು ಹೆಚ್ಚು ವಿಷಕಾರಿಯಾಗಿದೆ. ಕಚ್ಚಿದ ಕೆಲವೇ ಗಂಟೆಗಳಲ್ಲಿ ವ್ಯಕ್ತಿ ಸಾಯುತ್ತಾನೆ. ಸಾಮಾನ್ಯ ಕ್ರೈಟ್, ನಾಗರಹಾವಿಗಿಂತ ಐದು ಪಟ್ಟು ಹೆಚ್ಚು ವಿಷಕಾರಿಯಾಗಿದೆ. ಇದನ್ನು ಸೈಲೆಂಟ್ ಕಿಲ್ಲರ್ ಎಂದೂ ಕರೆಯುತ್ತಾರೆ. ವಾಸ್ತವವಾಗಿ, ಅದರ ಕಡಿತವು ಹೆಚ್ಚು ನೋವನ್ನು ಉಂಟುಮಾಡುವುದಿಲ್ಲ. ಕೆಲವರಿಗೆ ಗೊತ್ತೇ ಆಗುವುದಿಲ್ಲ. ಸುಮ್ಮನೆ ಮಲಗಿರುವವರಿಗೂ ಈ ಹಾವು ಕಚ್ಚುತ್ತದೆ ಎಂದು ಹೇಳಲಾಗುತ್ತದೆ. ಈ ಹಾವುಗಳು ರಾತ್ರಿಯಲ್ಲೇ ಹೆಚ್ಚಾಗಿ ಹೊರಬರುತ್ತವೆ. (ಏಜೆನ್ಸೀಸ್)