ನ್ಯೂಸ್

ಅಂಗೈ ಗಾತ್ರದ ಮೊಬೈಲ್​ನಿಂದ ಜಗತ್ತಿನ ನೆಮ್ಮದಿಯೇ ನಾಶ: ವಿವೋ ಸಮೀಕ್ಷೆಯಲ್ಲಿ ಶಾಕಿಂಗ್​ ಸಂಗತಿ ಬಯಲು | Smartphone Effects

Smartphone Effects : ಪ್ರಸ್ತುತ ಯುಗದಲ್ಲಿ ಸ್ಮಾರ್ಟ್​ಫೋನ್​ಗಳ ಅತಿಯಾದ ಬಳಕೆಯು ಜನರ ನಡುವಿನ ವೈಯಕ್ತಿಕ ಸಂಬಂಧಗಳನ್ನು ಹಾಳುಮಾಡುತ್ತಿದೆ. ಕೂತರು, ನಿಂತರು ಹಾಗೂ ಮಲಗಿದರೂ ಮೊಬೈಲ್​ ಬೇಕೇ ಬೇಕು. ಊಟ ಮಾಡುವಾಗ, ಪ್ರಯಾಣ ಮಾಡುವಾಗ ಮತ್ತು ನಿತ್ಯ ಕರ್ಮಗಳನ್ನು ಮುಗಿಸುವಾಗಲೂ ಮೊಬೈಲ್​ ಕೈಯಲ್ಲಿ ಹಿಡಿದಿರಲೇ ಬೇಕು. ಮೊಬೈಲ್​ ಇಲ್ಲದಿದ್ದರೆ ಕೈಕಾಲುಗಳೇ ಓಡುವುದಿಲ್ಲ, ಏನೋ ಕಳೆದುಕೊಂಡಂತೆ ಚಡಿಪಡಿಸುತ್ತೇವೆ ಎಂದು ಹೇಳುವ ಅನೇಕ ಮಂದಿ ಇದಾರೆ. ಅಂಗೈ ಗಾತ್ರದ ಒಂದು ಸಣ್ಣ ಮೊಬೈಲ್ ಇಂದು​ ಜಗತ್ತಿನ ನೆಮ್ಮದಿಯನ್ನೇ ನಾಶ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ, ಇದೇ ಮೊಬೈಲ್​ನಿಂದ ಇಂದು ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂಬ ಸ್ಫೋಟಕ ಸಂಗತಿ ಇತ್ತೀಚಿನ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ವಿವೋ ನಡೆಸಿದ ವಿವೋ-ಸ್ವಿಚ್​ಆಫ್​ 3.0 ಸಮೀಕ್ಷೆಯಲ್ಲಿ ಪೋಷಕರು, ಸಂಗಾತಿಗಳು ಮತ್ತು ಮಕ್ಕಳೊಂದಿಗಿನ ಸಂಬಂಧಗಳು ಸಂಪೂರ್ಣವಾಗಿ ನಾಶವಾಗುತ್ತಿವೆ ಎಂದು ತಿಳಿದುಬಂದಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಪೋಷಕರು ದಿನಕ್ಕೆ ಸರಾಸರಿ 5 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಳೆಯುತ್ತಿದ್ದರೆ, ಮಕ್ಕಳು 4 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಇವರೆಲ್ಲರೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಮಾರ್ಟ್​ಫೋನ್​ಗಳ ಅತಿಯಾದ ಬಳಕೆ ವೈಯಕ್ತಿಕ ಸಂಬಂಧಗಳನ್ನು ಗಂಭೀರವಾಗಿ ಹಾನಿಗೊಳಿಸುತ್ತಿದೆ ಎಂಬುದು ಇದೇ ಸಮೀಕ್ಷೆ ಹೇಳಿದೆ. ಶೇ. 66 ರಷ್ಟು ಪೋಷಕರು ಮತ್ತು ಶೇ. 56 ರಷ್ಟು ಮಕ್ಕಳು ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ತಮ್ಮ ವೈಯಕ್ತಿಕ ಸಂಬಂಧಗಳಲ್ಲಿ ನಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಿದ್ದಾರೆ. ಈ ಬದಲಾವಣೆಗಳು ಅವರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತವೆ. ಮತ್ತೊಂದೆಡೆ, 73 ಪ್ರತಿಶತ ಪೋಷಕರು ಮತ್ತು 69 ಪ್ರತಿಶತ ಮಕ್ಕಳು ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯೇ ತಮ್ಮ ನಡುವಿನ ಜಗಳ ಅಥವಾ ಕಲಹಕ್ಕೆ ಕಾರಣವೆಂದು ಸಮೀಕ್ಷೆಯು ಕಂಡುಹಿಡಿದಿದೆ.

ಆದಾಗ್ಯೂ, ಸ್ಮಾರ್ಟ್​ಫೋನ್​ಗಳು ಪೋಷಕರು ಮತ್ತು ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಸಮೀಕ್ಷೆಯ ಪ್ರಕಾರ, 76 ರಷ್ಟು ಪೋಷಕರು ಮತ್ತು 71 ರಷ್ಟು ಮಕ್ಕಳು ಸ್ಮಾರ್ಟ್‌ಫೋನ್ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಶೇ. 64 ರಷ್ಟು ಮಕ್ಕಳು ಸ್ಮಾರ್ಟ್‌ಫೋನ್‌ಗಳಿಗೆ ವ್ಯಸನಿಯಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬುದು ಇದೇ ಸಂದರ್ಭದಲ್ಲಿ ತಿಳಿದುಬಂದಿದೆ.

ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಪುಣೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಅಧ್ಯಯನ ಮಾಡಿದ ನಂತರ ವಿವೋ ಈ ಸಂಗತಿಗಳನ್ನು ಪ್ರಕಟಿಸಿದೆ. (ಏಜೆನ್ಸೀಸ್​)