ಬೆಂಗಳೂರು: ಕನ್ನಡದ ಹಿರಿಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯು ಇದೀಗ ಚೈನೀಸ್ ಹಾಗೂ ರಷ್ಯನ್ ಭಾಷೆಗಳಿಗೆ ಅನುವಾದಗೊಂಡಿದೆ.
ಕೇಂದ್ರ ಸರ್ಕಾರದ ಯೋಜನೆಯಂತೆ ಭಾರತೀಯ ಭಾಷೆಗಳಲ್ಲಿ ಬರೆದ 10 ಮಹಾನ್ ಸಾಹಿತ್ಯ ಕೃತಿಗಳನ್ನು ಎರಡೂ ಭಾಷೆಗೆ ಅನುವಾದ ಮಾಡಿಸಲಾಗಿದೆ.
2019ರಲ್ಲಿ ಕಿರ್ಗೀಸ್ಥಾನದ ಬಿಶ್ಕೆಕ್ನಲ್ಲಿ ನಡೆದ ಶಾಂಘೈ ಕೊ-ಆಪರೇಷನ್ ಆರ್ಗನೈಸೇಷನ್(ಎಸ್ಸಿಒ) ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಎಸ್ಸಿಒ ದೇಶಗಳ ಅತ್ಯುತ್ತಮ ಮನಸ್ಸುಗಳನ್ನು ಹತ್ತಿರವಾಗಿಸಲು 10 ಮಹಾನ್ ಕೃತಿಗಳನ್ನು ಚೈನೀಸ್, ರಷ್ಯನ್ ಹಾಗೂ ಎಸ್ಸಿಒ ಭಾಷೆಗಳಿಗೆ ಅನುವಾದ ಮಾಡಿಸಲಾಗುತ್ತದೆ ಎಂದು ಘೋಷಿಸಿದ್ದರು. ಈ ಯೋಜನೆಯ ಭಾಗವಾಗಿ 10 ಕೃತಿಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಆಯ್ಕೆ ಮಾಡಿತ್ತು. ಈ ಎಲ್ಲ ಕೃತಿಗಳ ಇಂಗ್ಲಿಷ್ ಅನುವಾದವನ್ನೂ ಮುದ್ರಣ ಮಾಡಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸ ರಾವ್ ಹೇಳಿದ್ದಾರೆ.